ಮಡಿಕೇರಿ, ಆ. 11: ಸೂರ್ಲಬ್ಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಡಿಕೇರಿ ಕ್ಲಬ್ ಮಹೀಂದ್ರ ವತಿಯಿಂದ ಲೇಖನ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು.

ಮಕ್ಕಳಿಗೆ ವಿವಿಧ ಸಾಮಗ್ರಿ ವಿತರಿಸಿದ ಗಾಳಿಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಷ್ ಸೋಮಯ್ಯ ಮಾತನಾಡಿ, ಸಮಾಜದಲ್ಲಿ ಉಳ್ಳವರು ಹಾಗೂ ಸೇವಾ ಸಂಸ್ಥೆಗಳು ಬಡ ಮಕ್ಕಳೇ ಹೆಚ್ಚಾಗಿ ಕಲಿಯುತ್ತಿರುವ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಸೂರ್ಲಬ್ಬಿಯಂತಹ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕ್ಲಬ್ ಮಹೀಂದ್ರ ರೆಸಾರ್ಟ್‍ನ ಮೆನೇಜರ್ ಸ್ವಪ್ನಕುಮಾರ್‍ದಾಸ್ ಮಾತನಾಡಿ, ಮಹೀಂದ್ರ ಸಮೂಹವು ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿ ಮೂಲಕ ಶಿಕ್ಷಣ, ಆರೋಗ್ಯ ಮತ್ತು ಪರಿಸರ ಮತ್ತಿತರ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದರು.

ರೆಸಾರ್ಟ್‍ನ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಮೆನೇಜರ್ ಕಾರ್ತಿಕೇಯನ್ ಮಾತನಾಡಿ, ನೌಕರರು ತಮ್ಮ ಆಯ್ಕೆ(ಇ.ಎಸ್.ಓ.ಪಿ.ಎಸ್.)ಯ ಸಾಮಾಜಿಕ ಜವಾಬ್ದಾರಿಯುತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ವೆಂಕಟೇಶ್ ನಾಯ್ಕ್, ಕ್ಲಬ್ ಮಹೀಂದ್ರ ಸಂಸ್ಥೆ ವತಿಯಿಂದ ಸೂರ್ಲಬ್ಬಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಪ್ರತಿವರ್ಷ ವಿವಿಧ ಸೌಲಭ್ಯ ನೀಡುತ್ತಿರುವದರಿಂದ ಮಕ್ಕಳ ಕಲಿಕೆಗೆ ಸಹಕಾರಿಯಾಗಿದೆ ಎಂದರು.

ಪ್ರೌಢಶಾಲಾ ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಸಿ.ಎನ್. ಯೋಗಾತ್ಮ, ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ಸದಸ್ಯ ಶಿವಯ್ಯ, ಮಹೀಂದ್ರ ಸಂಸ್ಥೆಯ ಹಿರಿಯ ಕಾರ್ಯನಿರ್ವಾಹಕ ನವೀನ್ ನರ್ಹೋನ, ಆಡಳಿತ ವಿಭಾಗದ ಸಹಾಯಕ ಮೆನೇಜರ್ ಅರುಣ್ ಕುಮಾರ್, ಸಂಸ್ಥೆಯ ಸಿಬ್ಬಂದಿ, ಶಿಕ್ಷಕರು, ಗ್ರಾಮಸ್ಥರು ಇದ್ದರು.

ಪ್ರೌಢಶಾಲಾ ಶಿಕ್ಷಕರಾದ ಮಂಜುನಾಥ್ ಮತ್ತು ಕೆ.ಎ. ಅಮೀನ ನಿರೂಪಿಸಿ, ಶಿಕ್ಷಕ ಎಂ.ಟಿ. ಪೂವಯ್ಯ ಸ್ವಾಗತಿಸಿ, ಟಿ.ಜಿ. ಪ್ರೇಮಕುಮಾರ್ ವಂದಿಸಿದರು.