ಮಡಿಕೇರಿ, ಆ. 11: ಜಿಲ್ಲೆಯಾದ್ಯಂತ ಮಹಾ ಮಳೆಯಿಂದಾಗಿ ಪ್ರವಾಹ, ಭೂಕುಸಿತದಿಂದ ಸಾಕಷ್ಟು ಹಾನಿ, ಸಾವು ನೋವು ಸಂಭವಿಸಿದೆ.
ಮುಕ್ಕೋಡ್ಲುವಿನಲ್ಲಿ ಹರಿಯುವ ನದಿಗೆ ಅಡ್ಡಲಾಗಿ ಹೆಮ್ಮೆತ್ತಾಳುವಿಗೆ ಸಂಪರ್ಕ ಕಲ್ಪಿಸುವ ಸೇತುವೆಗೆ ನದಿ ನೀರಿನೊಂದಿಗೆ ಕಳೆದ ಬಾರಿಯ ವಿಕೋಪದಲ್ಲಿ ಧರೆಗುರುಳಿದ್ದ ಮರಗಳು ಕೊಚ್ಚಿಬಂದು ಬಡಿದ ಹಿನ್ನೆಲೆಯಲ್ಲಿ ಸೇತುವೆ ಬಿರುಕು ಬಿಟ್ಟಿದೆ. ಭದ್ರಕಾಳಿ ದೇವಸ್ಥಾನದ ಬಳಿಯ ಕಾಲು ಸೇತುವೆ ಕೂಡ ಹಾನಿಗೀಡಾಗಿದೆ. ಮೇಘತ್ತಾಳುವಿನಿಂದ ಮಾಂದಲ್ ಪಟ್ಟಿಗೆ ತೆರಳುವ ರಸ್ತೆ ಒಡೆದು ಹೋಗಿದೆ. ಹೆಮ್ಮೆತ್ತಾಳು, ಉದಯಗಿರಿಯಲ್ಲಿ ಅಲ್ಲಲ್ಲಿ ಸಣ್ಣ ಪುಟ್ಟ ಮಣ್ಣು ಕುಸಿತ ಉಂಟಾಗಿದೆ. ಸ್ಥಳಕ್ಕೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚಂಗಪ್ಪ, ಸದಸ್ಯ ಬಿ.ಎನ್.ರಮೇಶ್ ಭೇಟಿ ನೀಡಿ ಪರಿಶೀಲಿಸಿದರು.ಮಡಿಕೇರಿ- ಸುಳ್ಯ ರಾಜ್ಯ ಹೆದ್ದಾರಿಯಲ್ಲಿ ಪೆರಾಜೆಯಲ್ಲಿ ಅಡ್ಡಲಾಗಿ ಬಿದ್ದ ಮರವನ್ನು ತಹಶೀಲ್ದಾರರ ನೇತೃತ್ವದಲ್ಲಿ ಅಗ್ನಿಶಾಮಕ ಹಾಗೂ ಗೃಹರಕ್ಷಕದಳದ ಸಿಬ್ಬಂದಿ ತೆರವುಗೊಳಿಸಿದರು.ಪೆರಾಜೆಯಿಂದ ಬಂಗಾರಕೋಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಲಾಯರಡ್ಕದಲ್ಲಿ ಬಿದ್ದ ಮರಗಳನ್ನು ಚಿಗುರು ಯುವಕ ಮಂಡಲದ ಸದಸ್ಯರು ತೆರವುಗೊಳಿಸಿದರು.