ಸಿದ್ದಾಪುರ, ಆ. 11: ಮಹಾಮಳೆಯ ಪ್ರವಾಹಕ್ಕೆ ಸಿಲುಕಿ ಸಿದ್ದಾಪುರದ ಕರಡಿಗೋಡು, ಗುಹ್ಯ, ಕೊಂಡಂಗೇರಿ ಭಾಗದ ನದಿದಡದ ನೂರಾರು ಮನೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಮತ್ತಷ್ಟು ಮನೆಗಳು ಕುಸಿಯಲಾರಂಭಿಸಿದೆ. ಕಳೆದ ಒಂದು ವಾರಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ನದಿಯ ಪ್ರವಾಹ ದಿಂದಾಗಿ ನದಿದಡದ ಮನೆಗಳು ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಮನೆಗಳು, ಕಾಫಿತೋಟಗಳು, ಗದ್ದೆ ಕೃಷಿಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ನದಿಯ ಪ್ರವಾಹ ಇಳಿಕೆಯಾಗುತ್ತಿದ್ದಂತೆ ಜಲಾವೃತಗೊಂಡ ಮನೆಗಳು ನಿಂತಲೇ ಕುಸಿಯುತ್ತಿದೆ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮಹಾಮಳೆಯಿಂದಾಗಿ ಈ ಬಾರಿ ಕಂಡು ಕೇಳರಿಯದಷ್ಟು ನಷ್ಟಗಳು ಸಂಭವಿಸುತ್ತಿವೆ. ನದಿದಡದ ಸಮೀಪ ಕಷ್ಟಪಟ್ಟು ಕೂಲಿ ಮಾಡಿ ಮನೆ ಕಟ್ಟಿದವರು ಹಾಗೂ ನದಿಯ ಅನತಿ ದೂರದಲ್ಲಿ ಮನೆ ಕಟ್ಟಿದ ನಿವಾಸಿಗಳು ಲಕ್ಷಾಂತರ ವೆಚ್ಚ ಮಾಡಿ ನಿರ್ಮಿಸಿದ ಮನೆಗಳು ನೀರುಪಾಲಾಗಿವೆ.
ಮನೆ ಕಳೆದುಕೊಂಡವರು ಶೋಚನೀಯ ಪರಿಸ್ಥಿತಿಯಲ್ಲಿದ್ದಾರೆ ಸಿದ್ದಾಪುರದ ಕರಡಿಗೋಡಿನಲ್ಲಿ 200ಕ್ಕೂ ಅಧಿಕ ಮನೆಗಳು ಪ್ರವಾಹಕ್ಕೆ ಸಿಲುಕಿವೆ. ನದಿದಡದ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಪರಿಹಾರ ಕೇಂದ್ರಗಳಲ್ಲಿ ತಮ್ಮ ಸಂಸಾರದೊಂದಿಗೆ ಆಶ್ರಯಪಡೆಯುತ್ತಿದ್ದಾರೆ. ಗುಹ್ಯ ಗ್ರಾಮದಲ್ಲಿ ಈ ಬಾರಿ ಪ್ರವಾಹಕ್ಕೆ ಸಿಲುಕಿ ಕೂಡುಗದ್ದೆ, ಕಕ್ಕಟ್ಟುಕಾಡುವಿನಲ್ಲಿ 150ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದು; 50ಕ್ಕೂ ಅಧಿಕ ಮನೆಗಳು ಕುಸಿದಿದೆ. ಕುಸಿದಿರುವ ಮನೆಗಳಲ್ಲಿದ್ದ ಮನೆಯ ಸಾಮಗ್ರಿಗಳು, ದಾಖಲಾತಿಗಳು ನೀರು ಪಾಲಾಗಿವೆ. ಗುಹ್ಯ ಗ್ರಾಮದಲ್ಲಿರುವ ಎಲ್ಲಾ ಗ್ರಾಮೀಣ ರಸ್ತೆಗಳು ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಮನೆ ಕಳೆದುಕೊಂಡಿರುವ ವೃದ್ಧರು, ಮಹಿಳೆಯರು ಪರಿಹಾರ ಕೇಂಧ್ರದಲ್ಲಿ ಕಣ್ಣೀರಿಡುತ್ತಿದ್ದಾರೆ. ಸಿದ್ದಾಪುರದ ಸೇತುವೆಯ ಸುತ್ತಮುತ್ತಲು ಪ್ರವಾಹದಿಂದಾಗಿ ಥೋಮಸ್ ಎಂಬವರಿಗೆ ಸೇರಿದ ಸಿಮೆಂಟ್ ಇಟ್ಟಿಗೆ ತಯಾರಿಸುವ ಕಟ್ಟಡ, ಕೊಠಡಿಗಳು ನೀರಿನಲ್ಲಿ ಮುಳುಗಿದೆ. ಸೇತುವೆಯ ಬಳಿ ನದಿಯು ಸಮುದ್ರದಂತೆ ಗೋಚರಿಸುತ್ತಿದೆ. ಪ್ರವಾಹದ ಭೀತಿಯಿಂದ ಇನ್ನು ಗ್ರಾಮಸ್ಥರು ಹೊರ ಬರದೇ ಆತಂಕಕ್ಕೆ ಒಳಗಾಗಿದ್ದಾರೆ. ನೆಲ್ಯಹುದಿಕೇರಿಯ ಚರ್ಚ್‍ಸೈಡ್ ಬಳಿ ಗದ್ದೆಯಲ್ಲಿ ಪೈರುಗಳು ಸಂಪೂರ್ಣ ಮುಳುಗಡೆಗೊಂಡಿವೆ. ಸಿದ್ದಾಪುರದ ಸಂತ್ರಸ್ತರಿಗೆ ಅಗತ್ಯ ಸೌಲಭ್ಯಗಳನ್ನು ವೀರಾಜಪೇಟೆ ತಹಶೀಲ್ದಾರ್ ಪುರಂದರ ನೇತೃತ್ವದಲ್ಲಿ ಕಂದಾಯ ಪರಿವೀಕ್ಷಕ ನಾಗೇಶ್‍ರಾವ್, ಗ್ರಾಮಲೆಕ್ಕಿಗರಾದ ಓಮಪ್ಪ ಬಣಕಾರ್, ಮುತ್ತಪ್ಪ, ಗೌಡಜ್ಜ, ಸಹಾಯಕ ಕೃಷ್ಣ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಮಳೆ ಕಡಿಮೆಯಾಗುತ್ತಿದ್ದರೂ ಜಲಾವೃತಗೊಂಡ ಹಾಗೂ ಮುಳುಗಡೆಗೊಂಡು ಕುಸಿದಿರುವ ಮನೆಗಳಿಗೆ ಸಂತ್ರಸ್ತರಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಕಾವೇರಿ ನದಿಯು ರಭಸದಿಂದ ಹರಿಯುತ್ತಿದೆ. ಅಲ್ಲದೇ ನೀರಿನ ಮಟ್ಟ ಅಧಿಕವಿದೆ. ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಯ ವ್ಯಾಪಿಗೆ ಒಳಪಡುವ ಬೆಟ್ಟದಕಾಡು, ಬರಡಿ, ಕುಂಬಾರಗುಂಡಿಯ ನದಿ ದಡ ಸೇರಿ 350ಕ್ಕೂ ಅಧಿಕ ಮನೆಗಳು ಪ್ರವಾಹದಿಂದಾಗಿ 50ಕ್ಕೂ ಅಧಿಕ ಮನೆಗಳು ಕುಸಿದಿದೆ. ನೆಲ್ಯಹುದಿಕೇರಿ, ಬರಡಿ ಅಂಗನವಾಡಿ, ಶಾದಿಮಹಲ್, ಸರ್ಕಾರಿ ಶಾಲೆÉ, ಮಸೀದಿ, ಸಭಾಂಗಣ ಸೇರಿದಂತೆ ಸಾವಿರಾರು ಮಂದಿ ನಿರಾಶ್ರಿತರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಈ ಬಾರಿಯ ಪ್ರವಾಹ ದಿಢೀರನೆ ಏರಿಕೆಯಾದ ಹಿನ್ನೆಲೆಯಲ್ಲಿ ಮನೆ ಮಂದಿ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಕೂಡ ತೆಗೆಯಲು ಸಾಧ್ಯವಾಗದೇ ಮಧ್ಯರಾತ್ರಿ ಮನೆ ಬಿಟ್ಟು ಬರುವಂತಹ ಪರಿಸ್ಥಿತಿ ನಿರ್ಮಾಣವಾಯಿತ್ತು. ಕೆಲವರು ತಮ್ಮ ಮನೆಗೆ ನೀರು ನುಗ್ಗುವದಿಲ್ಲ ಎಂಬ ಧೈರ್ಯದಿಂದ ಮನೆ ಸಾಮಗ್ರಿಗಳನ್ನು ಮನೆಯಲ್ಲೇ ಬಿಟ್ಟು ಬಂದಿದ್ದರು. ಇದೀಗ ಸಾಮಗ್ರಿಗಳು ನೀರು ಪಾಲಾಗಿವೆ. ನೆಲ್ಯಹುದಿಕೇರಿ ಪರಿಹಾರ ಕೇಂದ್ರದಲ್ಲಿ ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು ಅವರ ಮಾರ್ಗದರ್ಶನದಲ್ಲಿ ಕಂದಾಯ ಪರಿವೀಕ್ಷಕ ಮಧುಸೂದನ್, ಉಪ ತಹಶೀಲ್ದಾರ್ ಚಿನ್ನಪ್ಪ, ನೋಡಲ್ ಅಧಿಕಾರಿ ಕುಮಾರ್ ಹಾಗೂ ಗ್ರಾಮಲೆಕ್ಕಿಗ ಸಂತೋಷ್ ಸಂತ್ರಸ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ.
ನೆಲ್ಯಹುದಿಕೇರಿ ಗ್ರಾ.ಪಂ. ಜನಪ್ರತಿನಿಧಿಗಳು ಹಗಲಿರುಳು ಶ್ರಮಿಸುತ್ತಿದ್ದು, ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ನೆಲ್ಯಹುದಿಕೇರಿ ವ್ಯಾಪ್ತಿಯ ನದಿದಡದ ಪ್ರವಾಹದಿಂದಾಗಿ ಮನೆಗಳು ಕುಸಿಯಲಾರಂಭಿಸಿವೆ. ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸಂಪರ್ಕ ಕಡಿತಗೊಂಡಿದೆ. ಕೊಂಡಂಗೇರಿಯಲ್ಲಿ ಈ ಬಾರಿಯ ಮಹಾಮಳೆಯಿಂದಾಗಿ ನೂರಾರು ಮನೆಗಳು ಜಲಾವೃತಗೊಂಡಿವೆ. 20ಕ್ಕೂ ಅಧಿಕ ಮನೆಗಳು ಕುಸಿದಿವೆ. ನದಿದಡದ ನಿವಾಸಿಗಳು ಪ್ರವಾಹದಿಂದ ಬೆಚ್ಚಿ ಬಿದ್ದಿದ್ದಾರೆ. ಕೊಂಡಂಗೇರಿ, ಹಾಲುಗುಂದ ವ್ಯಾಪ್ತಿಯಲ್ಲಿ ನೀರಿನ ಮಟ್ಟ ಅಪಾಯಕಾರಿಯಾಗಿದೆ. ಅರೆಕಾಡುವಿನಲ್ಲಿ ಮಹಾಮಳೆಗೆ ಪ್ರವಾಹದಿಂದಾಗಿ ಗ್ರಾಮದ ನೆಲ್ಲಮಕ್ಕಡ ಕುಶಾಲಪ್ಪ, ಅಣ್ಣಾರಕಂಡ ಪೊನ್ನಪ್ಪ ಹಾಗೂ ತೋಡಿಯಂಡ , ಕಾಡುಮಂಡ, ಸಾದೇರ ಕುಟುಂಬ ಸೇರಿದಂತೆ ಹಲವು ಕೃಷಿಕರ ಗದ್ದೆ ಸಂಪೂರ್ಣ ಮುಳುಗಡೆಗೊಂಡಿದೆ. ಅಂದಾಜು 250ಕ್ಕೂ ಅಧಿಕ ಎಕರೆ ಗದ್ದೆ ಕೃಷಿ ನಷ್ಟಗೊಂಡಿದೆ ಎಂದು ತಿಳಿದು ಬಂದಿದೆ. ಅರೆಕಾಡು ಭಾಗಕ್ಕೆ ಈವರೆಗೂ ಕಂದಾಯ ಇಲಾಖಾಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಯಾರು ಭೇಟಿ ನೀಡಿಲ್ಲ ಎಂದು ಕೃಷಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಾಲ್ನೂರು - ತ್ಯಾಗತ್ತೂರು ಗ್ರಾಮದಲ್ಲೂ ಮನೆಗಳು ಜಲಾವೃತಗೊಂಡಿದ್ದು, ಐದಾರು ಮನೆಗಳು ಕುಸಿತಗೊಂಡಿವೆ. ನೀರಿನ ಹೊಡೆತಕ್ಕೆ ತ್ಯಾಗತ್ತೂರುವಿನ ಮೋರಿ ಹೊಡೆದು ಹೋಗಿದೆ. ಪ್ರವಾಹ ಪೀಡಿತ ವಾಲ್ನೂರು - ತ್ಯಾಗತ್ತೂರು - ನೆಲ್ಯಹುದಿಕೇರಿ ಪ್ರದೇಶಗಳಿಗೆ ಜಿಲ್ಲಾ ಪಂಚಾಯತ್ ಸದಸ್ಯೆ ಸುನೀತಾ ಮಂಜುನಾಥ್ ಭೇಟಿ ನೀಡಿದ್ದರು. ಪ್ರವಾಹಕ್ಕೆ ಸಿಲುಕಿಕೊಂಡಿದ್ದ ನಿವಾಸಿಗಳನ್ನು ವಾಲ್ನೂರು ಸರ್ಕಾರಿ ಶಾಲೆಯಲ್ಲಿ ತೆರೆಯಲಾದ ಪರಿಹಾರ ಕೇಂದ್ರಕ್ಕೆ ದೋಣಿ ಮೂಲಕ ಸಾಗಿಸಲಾಯಿತು. - ವಾಸು