ಸೋಮವಾರಪೇಟೆ, ಆ. 10: ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ತಾಲೂಕಿನಾದ್ಯಂತ ಹೆಚ್ಚಿನ ಪ್ರಮಾಣದ ಕಷ್ಟನಷ್ಟಗಳು ಸಂಭವಿಸುತ್ತಿದ್ದು, ಸಾರ್ವಜನಿಕ ಜನಜೀವನಕ್ಕೆ ತಕ್ಷಣದ ಸ್ಪಂದನೆ ನೀಡುವ ನಿಟ್ಟಿನಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಮುತುವರ್ಜಿಯಲ್ಲಿ ಪ್ರಾರಂಭಗೊಂಡಿರುವ ಕ್ಷಿಪ್ರ ಕಾರ್ಯಪಡೆಗೆ ಶಾಸಕರು ಚಾಲನೆ ನೀಡಿದರು.
ಸಾರ್ವಜನಿಕ ರಸ್ತೆ, ಮನೆಗಳ ಮೇಲೆ ಮರ ಉರುಳಿದ ಸಂದರ್ಭ ತಕ್ಷಣಕ್ಕೆ ಸಹಾಯಕ್ಕೆ ಧಾವಿಸಲು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ತಂಡ ಸಿದ್ಧವಾಗಿದ್ದು, ಮಾರುತಿ ಓಮ್ನಿ ವ್ಯಾನಿನಲ್ಲಿ ಮರ ಕತ್ತರಿಸುವ ಯಂತ್ರ, ಗರಗಸ, ಕತ್ತಿ, ಕೊಡಲಿ, ಹಗ್ಗ ಸಹಿತ ಇನ್ನಿತರ ಪರಿಕರಗಳೊಂದಿಗೆ ಸಿದ್ಧವಾಗಿದೆ.
ಇಲ್ಲಿನ ಶಾಸಕರ ಕಚೇರಿಯಲ್ಲಿ ಕ್ಷಿಪ್ರ ಕಾರ್ಯಪಡೆಗೆ ಚಾಲನೆ ನೀಡಿದ ಶಾಸಕರು ನಂತರ ತಂಡದೊಂದಿಗೆ ತಾಲೂಕಿನ ಹಾರಂಗಿ, ಕುಶಾಲನಗರ, ನೆಲ್ಲಿಹುದಿಕೇರಿ, ಕರಡಿಗೋಡು, ಹಾಲೇರಿ, ಮಕ್ಕಂದೂರು, ಹಟ್ಟಿಹೊಳೆ, ಮಕ್ಕೋಡ್ಲು, ಸೂರ್ಲಬ್ಬಿ, ಗರ್ವಾಲೆ ಸೇರಿದಂತೆ ಇತರ ಭಾಗಗಳಿಗೆ ತೆರಳಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದರು.
ಈ ಭಾಗದಲ್ಲಿ ಭಾರೀ ಮಳೆಯಿಂದಾಗಿ ಉಂಟಾಗಿರುವ ಕಷ್ಟನಷ್ಟಗಳನ್ನು ಪರಿಶೀಲಿಸಿದ ಶಾಸಕರು, ತಕ್ಷಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.