ಮಡಿಕೇರಿ, ಆ. 10: ತಾಯಿಯ ಎದೆ ಹಾಲು ನವಜಾತ ಶಿಶುವಿಗೆ ಅಮೃತವಿದ್ದಂತೆ ಹಾಗೂ ಅತ್ಯವಶ್ಯಕವಾದದ್ದು ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ಕಾರ್ಯಪ್ಪ ಪ್ರತಿಪಾದಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೋಧಕ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ನಗರದ ಜಿಲ್ಲಾ ಆಸ್ಪತ್ರೆ ಮಕ್ಕಳ ವಿಭಾಗದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಕಾರ್ಯಪ್ಪ, ಮಗುವಿಗೆ 6 ತಿಂಗಳು ತುಂಬುವವರೆಗೆ ಕಡ್ಡಾಯವಾಗಿ ಎದೆ ಹಾಲು ಉಣಿಸಬೇಕು. ಎದೆ ಹಾಲಿನಿಂದ ಮಗುವಿನ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುವದರೊಂದಿಗೆ ತಾಯಂದಿರಿಗೆ ಮಾರಕ ಕಾಯಿಲೆಗಳಾದಂತಹ ಕ್ಯಾನ್ಸರ್ ಹಾಗೂ ಹಲವು ರೋಗಗಳಿಂದ ರಕ್ಷಣೆ ನೀಡುತ್ತದೆ ಎಂದರು.
ಮಕ್ಕಳ ವಿಭಾಗದ ಹಿರಿಯ ವೈದ್ಯ ಡಾ. ಕೃಷ್ಣಾನಂದ ಮಾತನಾಡಿ, ವಿಶ್ವ ಸ್ತನ್ಯಪಾನ ಸಪ್ತಾಹ ತಾಯಂದಿರಲ್ಲಿ ಎದೆ ಹಾಲಿನ ಮಹತ್ವವನ್ನು ತಿಳಿಸಿ ಕೊಡುವ ವಿಶೇಷ ಕಾರ್ಯಕ್ರಮ ವಾಗಿದೆ. ಮಕ್ಕಳ ಪೋಷಕರು ಇದರ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದರು. ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಪುರುಷೋತ್ತಮ ಮಾತನಾಡಿ, ಈ ವರ್ಷದ ವಿಶ್ವ ಸ್ತನ್ಯಪಾನ ಸಪ್ತಾಹದ ಘೋಷವಾಕ್ಯವು ‘ಪೋಷಕರನ್ನು ಸಶಕ್ತಗೊಳಿಸಿ ಸ್ತನ್ಯಪಾನವನ್ನು ಸಕ್ರಿಯಗೊಳಿಸಿ’ ಎಂಬದಾಗಿದೆ ಎಂದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ. ರಾಮಚಂದ್ರ ಕಾಮತ್ ಅವರು ತಾಯಿಯ ಎದೆ ಹಾಲಿನ ಮಹತ್ವದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಆರ್‍ಸಿಹೆಚ್ ಅಧಿಕಾರಿ ಡಾ. ಗೋಪಿನಾಥ್, ಡಾ. ದಿವ್ಯರಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ವೈದ್ಯಕೀಯ ವಿದ್ಯಾರ್ಥಿಗಳು ಇತರರು ಇದ್ದರು. ಮಕ್ಕಳ ವಿಭಾಗದ ಡಾ. ಮಾಲತೇಶ್ ಹಾವನೂರು ಸ್ವಾಗತಿಸಿ, ನಿರೂಪಿಸಿದರು. ಡಾ. ವೀರೇಂದ್ರಕುಮಾರ್ ವಂದಿಸಿದರು.