ವೀರಾಜಪೇಟೆ, ಆ. 10: ಕೆಲವು ದಿನಗಳಿಂದ ಆರ್ಭಟಿಸಿದ್ದ ಮಳೆಯ ಪ್ರಮಾಣವು ಶನಿವಾರ ಕೊಂಚ ಇಳಿಮುಖಗೊಂಡಿದ್ದರೂ ಪ್ರವಾಹದ ಸ್ಥಿತಿ ಹಾಗೇ ಮುಂದುವರಿದಿದೆ.

ಸಮೀಪದ ಬೇತರಿ ಗ್ರಾಮದಲ್ಲಿ ಕಾವೇರಿ ನದಿಯು ಉಕ್ಕಿ ಹರಿದು ಬೇತರಿ ಹಾಗೂ ಹೆಮ್ಮಾಡು ಗ್ರಾಮ ಜಲಾವೃತಗೊಂಡಿದೆ. ಗ್ರಾಮದ ವ್ಯಾಪ್ತಿಯಲ್ಲಿ ಕಾವೇರಿ ನದಿಯು ಸತತ ಮೂರನೇ ದಿನವೂ ಸೇತುವೆಯ ಮೇಲ್ಭಾಗದಲ್ಲಿ ನೀರು ಹರಿದು ವೀರಾಜಪೇಟೆ-ಮಡಿಕೇರಿ ಹೆದ್ದಾರಿಯು ಬಂದ್ ಆಗಿ ಸಂಚಾರ ಸ್ಥಗಿತ ಮುಂದುವರೆದಿದೆ. ಸಮೀಪದ ಕದನೂರು ಹೊಳೆಯು ವೀರಾಜಪೇಟೆ- ಮಡಿಕೇರಿ ಹೆದ್ದಾರಿಯಲ್ಲಿನ ಸೇತುವೆ ಮೇಲ್ಭಾಗದಲಿ ನೀರು ಹರಿದ ಪರಿಣಾಮ ವೀರಾಜಪೇಟೆ - ನಾಪೋಕ್ಲು ನಡುವಿನ ಸಂಪರ್ಕ ಸತತ 3ನೇ ದಿನ ಕಡಿತಗೊಂಡಿದೆ. ಸಮೀಪದ ಆರ್ಜಿ ಗ್ರಾಮದಲ್ಲಿ ಜಲಾವೃತಗೊಂಡಿರುವ ಕೊಣನೂರು-ಮಾಕುಟ್ಟ ಹೆದ್ದಾರಿಯಲ್ಲಿ ಯಥಾಸ್ಥಿತಿಯಲ್ಲಿದೆ.

ವೀರಾಜಪೇಟೆಗೆ ಸಮೀಪ ಬಿಟ್ಟಂಗಾಲ, ಆರ್ಜಿ, ಕದನೂರು, ಕೆದಮುಳ್ಳೂರು ಗ್ರಾಮ ಸೇರಿದಂತೆ ಹಲವೆಡೆಗಳಲ್ಲಿ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ವೀರಾಜಪೇಟೆ ಪಟ್ಟಣದ ಅರಸುನಗರ, ನೆಹರುನಗರ ಸೇರಿದಂತೆ ಮಲೆತಿರಿಕೆ ಬೆಟ್ಟದಲ್ಲಿ ಹಲವು ಮನೆಗಳು ಜಖಂಗೊಂಡಿದೆ. ಪಟ್ಟಣದ ಸುಂಕದ ಕಟ್ಟೆಯಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಪಟ್ಟಣದ ಹಲವೆಡೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಕಳೆದ 24 ಗಂಟೆಯ ಅವಧಿಯಲ್ಲಿ ವಿಭಾಗಕ್ಕೆ 184 ಮಿ.ಮೀನಷ್ಟು ಮಳೆ(7.2 ಇಂಚುಗಳಷ್ಟು) ದಾಖಲಾಗಿದೆ.

ಭಾರೀ ಮಳೆಯ ಪರಿಣಾಮ ಬಾಳುಗೋಡುವಿನಲ್ಲಿ ಮನೆ ಮೇಲೆ ಮಣ್ಣು ಕುಸಿದು ಜಖಂಗೊಂಡಿದೆ ಎಂದು ತಾಲೂಕು ಕಚೇರಿಯ ಪರಿಹಾರ ವಿಭಾಗಕ್ಕೆ ದೂರು ಸಲ್ಲಿಸಲಾಗಿದೆ.

ನ್ಯಾಯಾಧೀಶರುಗಳ ಭೇಟಿ

ಭಾರೀ ಮಳೆಯ ಹಿನ್ನೆಲೆಯಲ್ಲಿ ದುರಂತಕ್ಕೀಡಾದ ಸ್ಥಳಗಳಿಗೆ ಇಲ್ಲಿನ ಸಮುಚ್ಚಯ ನ್ಯಾಯಾಲಯದ ಸಿವಿಲ್ ಜಡ್ಜ್ ನ್ಯಾಯಾಧೀಶ ಜಯ ಪ್ರಕಾಶ್, ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ. ರಮಾ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ನ್ಯಾಯಾಧೀಶರುಗಳು ಪರಿಹಾರ ಕೇಂದ್ರಕ್ಕೂ ಭೇಟಿ ನೀಡಿ ಸಂತ್ರಸ್ತರಿಗೆ ಪರಿಹಾರದ ಬಗ್ಗೆ ವಿಚಾರಿಸಿದರು.

ನ್ಯಾಯಾಧೀಶರ ಜೊತೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಅವರು ಇದ್ದರು. -ಡಿ.ಎಂ. ರಾಜ್‍ಕುಮಾರ್