ಕೂಡಿಗೆ, ಆ.10 : ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಕಾವೇರಿ- ಹಾರಂಗಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ ಕೂಡಿಗೆ, ಕೂಡ್ಲೂರು, ಮುಳ್ಳಸೋಗೆ ಕೂಡುಮಂಗಳೂರು, ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 350ಕ್ಕೂ ಹೆಚ್ಚು ಮನೆಗಳು ನೀರಿನಿಂದ ಜಲಾವೃತಗೂಂಡಿವೆ. ಕೂಡು ಮಂಗಳೂರು ಗ್ರಾಮ ಪಂಚಾಯತಿಯ ವಿವೇಕಾನಂದ ಬಡಾವಣೆಯ 50 ಮನೆಗಳು, ಕೂಡ್ಲೂರು ಬಡಾವಣೆ 36 ಮನೆ ಕೂಡಿಗೆಯಲ್ಲಿ ಹಾರಂಗಿ ತಟ್ಟದಲ್ಲಿರುವ 60 ಮನೆಗಳು, ಮುಳ್ಳಸೋಗೆ ಗ್ರಾಮ ಪಂಚಾಯತಿ 3 ಬಡಾವಣೆಗಳು ಸೇರಿದಂತೆ 150ಕ್ಕೂ ಹೆಚ್ಚು ಮನೆಗಳು ಇಂದು ಜಲಾವೃತಗೊಂಡಿವೆ. ಕೂಡಿಗೆಯಲ್ಲಿ ಕಾವೇರಿ - ಹಾರಂಗಿ ಸಂಗಮ ಸ್ಥಳದಿಂದ ಎರಡು ನದಿಗಳು ಸಂಗಮವಾಗಿ ಬಾರಿ ನೀರು ಹರಿಯುತ್ತಿರುವದರಿಂದ ಈ ಕೆಳ ಪ್ರದೇಶದಲ್ಲಿ ಬಾರಿ ನೀರು ನುಗ್ಗುತ್ತಿದೆ. ಈ ಪ್ರದೇಶದಲ್ಲಿ ಕಳೆದ ಬಾರಿ 150ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಈ ಜಲಾವೃತಗೊಂಡ ಪ್ರದೇಶದ ಜನರಿಗೆ ಕೂಡಿಗೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪರಿಹಾರ ಕೇಂದ್ರವನ್ನು ತರೆಯಲಾಗಿದೆ. - ನಾಗರಾಜಶೆಟ್ಟಿ