ನಾಪೋಕ್ಲು, ಆ. 10: ಕಳೆದ ಏಳೆಂಟು ದಶಕಗಳ ಇತಿಹಾಸದಲ್ಲೇ ಕಂಡು ಕೇಳರಿಯದಂತೆ ರೀತಿಯಲ್ಲಿ ಕಾವೇರಿ ನದಿನೀರು ನಾಪೋಕ್ಲು ವ್ಯಾಪ್ತಿಯನ್ನು ಆಕ್ರಮಿಸಿಕೊಂಡಿದ್ದು, ಉಕ್ಕಿಹರಿದ ಕಾವೇರಿ ನದಿ ಪ್ರವಾಹದಿಂದಾಗಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಜಲಾವೃತಗೊಂಡಿದ್ದು, ನಾಪೋಕ್ಲು ಪಟ್ಟಣ ದ್ವೀಪದಂತಾಗಿದೆ.
ವಿದ್ಯುತ್ ಸಂಪರ್ಕವಿಲ್ಲದೇ ಸ್ಥಳೀಯರು ಕತ್ತಲೆಯ ಕೂಪದಲ್ಲಿ ದಿನಕಳೆಯುವಂತಾಗಿದ್ದು, ಮೊಬೈಲ್ ನೆಟ್‍ವರ್ಕ್ ಇಲ್ಲದೇ ಇರುವದರಿಂದ ಹೊರಜಗತ್ತಿನ ಸಂಪರ್ಕವನ್ನೇ ಸ್ಥಳೀಯರು ಕಳೆದುಕೊಂಡಿದ್ದಾರೆ. ನಾಪೋಕ್ಲು-ಚೆರಿಯಪರಂಬು ಜಂಕ್ಷನ್‍ನ ಬಳಿ ರಸ್ತೆ ಸೇರಿದಂತೆ ರಸ್ತೆಯ ಇಕ್ಕೆಲಗಳ ಗದ್ದೆಗಳು ಜಲಾವೃತಗೊಂಡಿದ್ದು, ಸಮುದ್ರದಂತೆ ಗೋಚರಿಸುತ್ತಿದೆ.
ತಮ್ಮ ಜೀವನದಲ್ಲಿ ಕಾವೇರಿ ನದಿ ರಸ್ತೆಯ ಈ ಮಟ್ಟದವರೆಗೆ ಹರಿದದ್ದು, ನೋಡಿಲ್ಲ ಹಾಗೂ ಕೇಳಿಲ್ಲವೆಂದು ನಾಪೋಕ್ಲು ನಿವಾಸಿ 86 ವರ್ಷದ ಇಳಿವಯಸ್ಸಿನ ಅರೆಯಡ ಕಾಳಪ್ಪ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯ್ತಿ ಸದಸ್ಯ ಮುರುಳಿ ಕರುಂಬಮಯ್ಯ ಮಾತನಾಡಿ, ಕಳೆದ 60-70 ವರ್ಷಗಳಿಂದ ಕಾವೇರಿ ನದಿ ನೀರು ರಸ್ತೆಯ ಈ ಮಟ್ಟಕ್ಕೆ ಹರಿದ ಉದಾಹರಣೆ ಇಲ್ಲ. ಕಳೆದ ನಾಲ್ಕೈದು ದಿನಗಳ ಮಳೆಗೆ ನದಿ ನೀರು ಈ ಮಟ್ಟಕ್ಕೆ ಹರಿದು ಇತಿಹಾಸ ಸೃಷ್ಟಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರಲ್ಲದೇ, ನದಿಪ್ರವಾಹದಿಂದಾಗಿ ನಾಪೋಕ್ಲು ವ್ಯಾಪ್ತಿಯಲ್ಲಿ ಮನೆಗಳು ಜಲಾವೃತಗೊಂಡು ಕೃಷಿಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗಿ ಅತಿಹೆಚ್ಚು ನಷ್ಟ ಸಂಭವಿಸಿದೆ. ನದಿದಡದ ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, ಜಿಲ್ಲಾಡಳಿತ ಕೂಡಲೇ ಇತ್ತ ಗಮನ ಹರಿಸಿ ಒತ್ತುವರಿ ಆದ ನದಿದಡದ ಸರ್ವೆಕಾರ್ಯ ನಡೆಸಬೇಕು. ಹಾಗೂ ಪ್ರವಾಹದಿಂದ ನಷ್ಟಕ್ಕೊಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದ ಮಂಜಟ್ ಕಾಲೋನಿಯಲ್ಲಿ ಪ್ರವಾಹದಿಂದಾಗಿ ಎಂಟು ಮನೆಗಳು ಕುಸಿದಿದ್ದು, ಗ್ರಾಮದ ಸುಮಾರು 30 ಜನರಿಗೆ ಆಶ್ರಯವಿಲ್ಲದೇ ಸಂಕಷ್ಟದಲ್ಲಿದ್ದು, ಇದುವರೆವಿಗೂ ಸಂತ್ರಸ್ತರನ್ನ ಯಾರೂ ಭೇಟಿ ಮಾಡಿಲ್ಲವೆಂದು ಗ್ರಾಮಸ್ಥ ಕೆ.ಆರ್. ಸುಗುಣ ಆರೋಪಿಸಿದ್ದು, ಕೂಡಲೇ ಸಂತ್ರಸ್ತರಿಗೆ ಬಲ್ಲಮಾವಟಿಯಲ್ಲಿ ನಿರಾಶ್ರಿತರ ಕೇಂದ್ರವನ್ನು ತೆರೆಯಬೇಕೆಂದು ಗ್ರಾಮಸ್ಥರ ಪರವಾಗಿ ಒತ್ತಾಯಿಸಿದ್ದಾರೆ. - ವರದಿ-ದುಗ್ಗಳ ಸದಾನಂದ