*ಗೋಣಿಕೊಪ್ಪಲು, ಆ. 10: ನಾಲ್ಕು ದಿನಗಳ ಕಾಲ ನೀರಿನಲ್ಲಿ ಮುಳುಗಿದ್ದ ಗೋಣಿಕೊಪ್ಪಲು ಇದೀಗ ನಿಧಾನವಾಗಿ ಮೇಲೇಳುತ್ತಿದೆ. ಮಳೆ ರಭಸ ಕಡಿಮೆಯಾಗಿದ್ದು ಎಲ್ಲೆಡೆ ಅಸ್ತವ್ಯಸ್ತಗೊಂಡಿದ್ದ ಸಂಚಾರ ವ್ಯವಸ್ಥೆ ಮತ್ತೆ ತೆರೆದುಕೊಂಡಿದೆ.

ಕೀರೆಹೊಳೆ ಪ್ರವಾಹ ತಗ್ಗಿ ಜಲಾವೃತಗೊಂಡಿದ್ದ ಮನೆ, ಅಂಗಡಿ ಮಳಿಗೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ನೆರೆಹಾವಳಿಯಿಂದ ತಮ್ಮ ಸಂಬಂಧಿಕರ ಮನೆ ಹಾಗೂ ಪರಿಹಾರ ಕೇಂದ್ರಗಳಲ್ಲಿ ಆಸರೆ ಪಡೆದಿದ್ದ ನೆರೆಹಾವಳಿ ಸಂತ್ರಸ್ತರು ಈಗ ತಮ್ಮ ಮನೆಗಳತ್ತ ಮುಖ ಮಾಡಿದ್ದಾರೆ. ಮನೆಯ ಒಳಗೆ ತುಂಬಿದ್ದ ಕೆಸರು ಮಯ ನೀರನ್ನು ಹೊರಗೆ ತೆಗೆಯುವ ಕೆಲಸದಲ್ಲಿ ನಿರತರಾಗಿದ್ದಾರೆ.

ಸಂಪೂರ್ಣ ಜಲಾವೃತ ಗೊಂಡಿದ್ದ ನೇತಾಜಿ ಬಡಾವಣೆ, 3ನೇ ವಿಭಾಗದ, ಅಚ್ಚಪ್ಪ ಲೇಔಟ್ ಹಾಗೂ 2ನೇ ಬಡಾವಣೆಯಲ್ಲಿ ಇನ್ನೂ ಕೂಡ ಪ್ರವಾಹ ಕಡಿಮೆಯಾಗಿಲ್ಲ. ಬೈಪಾಸ್ ರಸ್ತೆಯ ಬಹುಪಾಲು ಅಂಗಡಿ ಮಳಿಗೆಗಳು ನೀರಿನಲ್ಲಿ ಮುಳುಗಿದ್ದರಿಂದ ಕೆಲವು ಕಡೆ ವಸ್ತುಗಳೇ ಕಾಣದಂತೆ ಕೆಸರು ತುಂಬಿದೆ. ಜತೆಗೆ ಕೆಲವು ವಸ್ತುಗಳು ನೀರು ಮಯವಾಗಿವೆ. ಬೈಪಾಸ್ ರಸ್ತೆಯ ಎರಡು ಸಿಮೆಂಟ್ ಮಳಿಗೆಗೆ ಭಾರಿ ಹಾನಿಯಾಗಿದೆ.

ಪೊನ್ನಂಪೇಟೆಗೆ ತೆರಳುವ ಮಾರ್ಗದ ಮಳಿಗೆಗಳಿಗೆ ಬಹಳಷ್ಟು ನಷ್ಟವಾಗಿದೆ. ಇಲ್ಲಿನ ದವಸ ಧಾನ್ಯಗಳು ನೀರಿನಲ್ಲಿ ಮುಳುಗಿವೆ. ಅಂಗಡಿ ಮಾಲೀಕರು ಶನಿವಾರ ಬೆಳಿಗ್ಗೆ ಒದ್ದೆಯಾಗಿದ್ದ ದವಸಧಾನ್ಯಗಳ ಚೀಲಗಳನ್ನು ತಂದು ಹೊರಗೆ ಸುರಿಯುತ್ತಿದ್ದುದು ಮನಕಲಕಿಸಿತು.

ಅರುವತ್ತೊಕ್ಕಲು ಕಡೆಯಿಂದ ಗೋಣಿಕೊಪ್ಪಲು ಪಟ್ಟಣಕ್ಕೆ ಆಗಮಿಸುವ ತೋಡಿನ ಸಂಪರ್ಕ ಸೇತುವೆ ಕುಸಿದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಈ ಸೇತುವೆಯನ್ನು 4 ವರ್ಷಗಳ ಹಿಂದಷ್ಟೆ ನಿರ್ಮಿಸಲಾಗಿತ್ತು.

4 ದಿನಗಳಿಂದ ಕೆಲವು ಮನೆಗಳು ನೀರಿನಲ್ಲಿ ಮುಳುಗಿದ್ದರೂ ಎಲ್ಲಿಯೂ ಮನೆಗಳು ಕುಸಿದಿಲ್ಲ. ಯಾವದೇ ಜೀವ ಹಾನಿಯಾಗಿಲ್ಲ. ಆದರೆ ರಸ್ತೆಗಳಿಗೆ ಮಾತ್ರ ಭಾರಿ ಹಾನಿಯಾಗಿದೆ. ಗೋಣಿಕೊಪ್ಪಲು ಪೊನ್ನಂಪೇಟೆ ಮಾರ್ಗದ ರಸ್ತೆಯ ಇಕ್ಕೆಲಗಳಲ್ಲಿ ಹರಿದ ನೀರು ಬೃಹತ್ ಕಂದಕವನ್ನೇ ನಿರ್ಮಿಸಿದೆ. ಶನಿವಾರ ಮಧ್ಯಾಹ್ನದ ಬಳಿಕ ಮಳೆ ಪ್ರಮಾಣ ಕಡಿಮೆಯಾಗಿರುವದರಿಂದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

ಹುದಿಕೇರಿ ಹೈಸೊಡ್ಲೂರು ರಸ್ತೆ ಮಾರ್ಗ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಬಾಳೆಲೆ, ನಿಟ್ಟೂರು ನಡುವಿನ ಲಕ್ಷ್ಮಣತೀರ್ಥ ನದಿ ಪ್ರವಾಹ ತಗ್ಗಿಲ್ಲ. ಜಾಗಲೆ, ನಿಟ್ಟೂರು ನಡುವೆಯೂ ಲಕ್ಷ್ಮಣತೀರ್ಥ ನದಿ ಪ್ರವಾಹ ಇದೆ. ಇದರಿಂದ ಈ ಭಾಗದ ಜನತೆ ಹೊರಗಿನ ಸಂಪರ್ಕವನ್ನೇ ಕಡಿದುಕೊಂಡಿದ್ದಾರೆ. ಶನಿವಾರ ಮಧ್ಯಾಹ್ನದ ಬಳಿಕ ಮಳೆ ಪ್ರಮಾಣ ಕಡಿಮೆಯಾಗಿರುವದರಿಂದ ಪ್ರವಾಹ ಇಳಿಯುವ ಆಶಾಭಾವ ಅಲ್ಲಿಯ ಜನತೆಯದ್ದಾಗಿದೆ.

ಚಿತ್ರ, ವರದಿ: ಎನ್.ಎನ್. ದಿನೇಶ್