ಸುಂಟಿಕೊಪ್ಪ, ಆ. 10: ಅಖಂಡ ಭಾರತ ಸಂಕಲ್ಪಯಾತ್ರೆ ಹಾಗೂ ಬಕ್ರೀದ್ ಹಬ್ಬ ಆಚರಣೆ ಸಂದರ್ಭದಲ್ಲಿ ಶಾಂತಿ ಕಾಪಾಡಿಕೊಳ್ಳಬೇಕು. ಯಾವದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದೆಂದು ಪೊಲೀಸ್ ವೃತ್ತ ನಿರೀಕ್ಷಕ ಎನ್. ಕುಮಾರ್ ಆರಾಧ್ಯ ಹೇಳಿದರು.

ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಲಾದ ಅಖಂಡ ಭಾರತ ಸಂಕಲ್ಪಯಾತ್ರೆ ಹಾಗೂ ಬಕ್ರೀದ್ ಹಬ್ಬ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಬ್ಬ ದಿನಗಳು ಬೇರೆ ಸಮುದಾಯದವರ ಭಾವನೆಗೆ ಘಾಸಿಗೊಳಿಸದಂತೆ ಎಚ್ಚರವಹಿಸಬೇಕು ಎಂದು ಅವರು ಹೇಳಿದರು.

ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ಶಾಂತಿ ಸೌಹಾರ್ದತೆ ಕಾಪಾಡುವದು ಎಲ್ಲಾ ಧರ್ಮದವರ ಕರ್ತವ್ಯವಾಗಿದೆ. ಕೋಮು ಸೌಹಾರ್ದತೆಗೆ ಧಕ್ಕೆಯಾದರೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವದು ಎಂದರು. ಈ ಸಂದರ್ಭ ಕೆದಕಲ್ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ರೈ, ಪಿ.ಆರ್. ಸುನಿಲ್ ಕುಮಾರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಎಫ್. ಸಬಾಸ್ಟಿನ್, ಗೌರಿ ಗಣೇಶ ಆಚರಣಾ ಸಮಿತಿ ಅಧ್ಯಕ್ಷ ಬಿ.ಎಂ. ಸುರೇಶ್, ಕಾರ್ಯದರ್ಶಿ ಸುರೇಶ್ ಗೋಪಿ, ನಾಗೇಶ್ ಪೂಜಾರಿ, ಅಬ್ದುಲ್ ರಜಾಕ್, ಗ್ರಾ.ಪಂ. ಸದಸ್ಯ ಉಸ್ಮಾನ್, ಧಾರ್ಮಿಕ ಮುಖಂಡರು ಮತ್ತಿತರರು ಇದ್ದರು.