ಮಡಿಕೇರಿ, ಆ. 10: ಕೊಡಗು ಜಿಲ್ಲೆಯಾದ್ಯಂತ ವಾಯು-ವರುಣನ ಆರ್ಭಟ ಮುಂದುವರಿತಿದ್ದು, ಈಗಾಗಲೇ ಏರಿಕೆಯಾಗಿರುವ ನೀರಿನ ಮಟ್ಟದಲ್ಲಿ ಇನ್ನೂ ಪೂರ್ಣ ಇಳಿಮುಖವಾಗಿಲ್ಲ. ಬಹುತೇಕ ಕಡೆಗಳಲ್ಲಿನ ಪ್ರವಾಹ ಪರಿಸ್ಥಿತಿ ಯಥಾ ಸ್ಥಿತಿಯಲ್ಲೇ ಮುಂದುವರಿದಿರುವದು ಒಂದೆಡೆಯಾದರೆ ಕೇವಲ ಕೆಲವು ಜಾಗಗಳಲ್ಲಿ ಮಾತ್ರ ಮಳೆಯ ತೀವ್ರತೆ ತುಸು ಇಳಿಕೆಯಾಗಿದ್ದು, ನೀರಿನ ಪ್ರಮಾಣವೂ ಸ್ವಲ್ಪಮಟ್ಟಿಗೆ ಮಾತ್ರ ಕಡಿಮೆಯಾಗಿದೆ.

ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ವೀರಾಜಪೇಟೆ ತಾಲೂಕಿನಲ್ಲಿ ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಸರಾಸರಿ 9.10 ಇಂಚಿನಷ್ಟು ಮಳೆಯಾಗಿರುವದು ಒಂದು ರೀತಿಯಲ್ಲಿ ದಾಖಲೆಯಂತಾಗಿದೆ. ಈ ತಾಲೂಕಿನ ಹುದಿಕೇರಿ ಹೋಬಳಿಯಲ್ಲಿ 14.40 ಇಂಚು ಹಾಗೂ ಹಿಂದಿನ ವರ್ಷಗಳಲ್ಲಿ ಮಳೆ ಕಡಿಮೆ ಇರುತ್ತಿದ್ದ ಬಾಳೆಲೆ ಹೋಬಳಿಯಲ್ಲಿ 12.81 ಇಂಚಿನಷ್ಟು ಭಾರೀ ಮಳೆ ಸುರಿದಿದೆ. ಇದರೊಂದಿಗೆ ತಾಲೂಕಿನ ಇನ್ನಿತರ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲೂ ಕೂಡ ಸುರಿದಿರುವ ಮಳೆಯ ಪ್ರಮಾಣವೂ ಹೆಚ್ಚಿದೆ.

ವೀರಾಜಪೇಟೆ ತಾಲೂಕಿನಲ್ಲಿ 2018ರಲ್ಲಿ ಜನವರಿಯಿಂದ ಈ ಅವಧಿಯಲ್ಲಿ 89.17 ಇಂಚಿನಷ್ಟು ಮಳೆಯಾಗಿದ್ದು, ಇದೀಗ ಈ ವರ್ಷದ ಪ್ರಮಾಣ 79.18 ಇಂಚು ತಲಪಿದೆ. ಕಳೆದ ಸಾಲಿನ ಮಳೆಗೆ ಹೋಲಿಸಿದಲ್ಲಿ ಕೇವಲ 10 ಇಂಚು ಮಾತ್ರ ಕಡಿಮೆಯಾಗಿದೆ. ಕಳೆದ ವಾರದಿಂದೀಚೆಗೆ ಮಾತ್ರ ಇಷ್ಟೊಂದು ಪ್ರಮಾಣದ ಮಳೆಯಾಗಿರುವದು ಕಂಡುಬಂದಿದೆ.

ಜಿಲ್ಲೆಯಲ್ಲೂ ಸರಾಸರಿ 7.09 ಇಂಚು

ಕಳೆದ 24 ಗಂಟೆಯ ಅವಧಿಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಮತ್ತೊಮ್ಮೆ 7.09 ಇಂಚಿನಷ್ಟು ಸರಾಸರಿ ಮಳೆ ಸುರಿದಿದೆ. ವೀರಾಜಪೇಟೆ ತಾಲೂಕು ಸರಾಸರಿ 9.10 ಇಂಚಾಗಿದ್ದರೆ, ಮಡಿಕೇರಿ ತಾಲೂಕಿನಲ್ಲಿ 7.35 ಇಂಚು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 4.82 ಇಂಚಿನಷ್ಟು ಸರಾಸರಿ ಮಳೆಯಾಗಿದೆ.

ಹೋಬಳಿವಾರು ವಿವರ

ಜಿಲ್ಲೆಯ ವಿವಿಧ ಹೋಬಳಿಗಳಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದಿರುವ ಮಳೆಯ ಪ್ರಮಾಣ ಇಂತಿದೆ. ಮಡಿಕೇರಿ ತಾಲೂಕಿನ ಮಡಿಕೇರಿ ಕಸಬಾದಲ್ಲಿ 5.34 ಇಂಚು, ನಾಪೋಕ್ಲು 7.86 ಇಂಚು, ಸಂಪಾಜೆ 5.86, ಭಾಗಮಂಡಲ ಹೋಬಳಿಯಲ್ಲಿ 10.40 ಇಂಚು ಮಳೆಯಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ವೀರಾಜಪೇಟೆ ಕಸಬಾ 7.33 ಇಂಚು, ಹುದಿಕೇರಿ 9.10, ಶ್ರೀಮಂಗಲ 6.4, ಪೊನ್ನಂಪೇಟೆ 7.81, ಅಮ್ಮತ್ತಿ 5.86, ಬಾಳೆಲೆಯಲ್ಲಿ 12.81, ಇಂಚು ಮಳೆಯಾಗಿದೆ.

ಸೋಮವಾರಪೇಟೆ ತಾಲೂಕಿನಲ್ಲಿ ಸೋಮವಾರಪೇಟೆ ಕಸಬಾ 3.92, ಶನಿವಾರಸಂತೆ 5.17, ಶಾಂತಳ್ಳಿ 8.88, ಕೊಡ್ಲಿಪೇಟೆ 5.42 ಇಂಚು, ಕುಶಾಲನಗರ 2.32 ಹಾಗೂ ಸುಂಟಿಕೊಪ್ಪ ಹೋಬಳಿಗೆ 3.24 ಇಂಚು ಮಳೆಯಾಗಿದೆ.

ಮಡಿಕೇರಿ ತಾಲೂಕಿಗೆ ಜನವರಿಯಿಂದ ಈತನಕ 95.39 ಇಂಚು ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಗೆ 157.99 ಇಂಚು ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿಗೆ ಜನವರಿಯಿಂದ ಈತನಕ 48.02 ಇಂಚು ಮಳೆಯಾಗಿದ್ದು, ಕಳೆದ ಸಾಲಿನಲ್ಲಿ 89.94 ಇಂಚು ಮಳೆಯಾಗಿತ್ತು.