ಶ್ರೀಮಂಗಲ, ಆ. 10: ದಕ್ಷಿಣ ಕೊಡಗಿನ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಮತ್ತು ಘಟ್ಟ ಪ್ರದೇಶವಾಗಿರುವ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ಅಲ್ಲಲ್ಲಿ ಮಣ್ಣು ಕುಸಿತ ಉಂಟಾಗುತ್ತಿದ್ದು, ದಿನೇ ದಿನೇ ಭೂಮಿ ಜಾರುವ ಪ್ರಮಾಣ ಹೆಚ್ಚಾಗುತ್ತಿದೆ. ಆತಂಕಗೊಂಡಿರುವ ಗ್ರಾಮಸ್ಥರು ಗ್ರಾಮ ತೊರೆದು ಸುರಕ್ಷಿತ ಜಾಗಗಳಿಗೆ ತೆರಳಿದ್ದು, ಇನ್ನೂ ಕೆಲವರು ಭೂಕುಸಿತ ಉಂಟಾಗುತ್ತಿರುವ ಹಿನ್ನೆಲೆ ಶನಿವಾರ ಮನೆ ತೊರೆದು ಬಂಧುಗಳ ಮನೆಯಲ್ಲಿ ಆಶ್ರಯ ಪಡೆಯಲು ತೆರಳುತ್ತಿರುವದು ಕಂಡುಬಂದಿದೆ.
ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಪರಕಟಗೇರಿಯಿಂದ ಕೆ.ಕೆ.ಆರ್. ರಸ್ತೆಯವರೆಗೆÉ ಸುಮಾರು 15 ಕಿ.ಮೀ ಅಂತರದಲ್ಲಿ 40ಕ್ಕೂ ಅಧಿಕ ಜಾಗದಲ್ಲಿ ಮಣ್ಣು ಕುಸಿತ ಉಂಟಾಗಿದೆ. ಬಿರುನಾಣಿ ಗ್ರಾ.ಪಂ. ವ್ಯಾಪ್ತಿಗೆ ಕಳೆದ 5 ದಿನದಲ್ಲಿ 70 ಇಂಚಿಗೂ ಅಧಿಕ ಮಳೆಯಾಗಿದ್ದು, ಶನಿವಾರವೂ ಮಳೆ ಮುಂದುವರೆದಿರುವದು ಆತಂಕಕ್ಕೀಡು ಮಾಡಿದೆ.
ಪೆÇರಾಡು ಗ್ರಾಮದಲ್ಲಿ ತೋಟ ಕುಸಿಯಲಾರಂಭಿಸಿದ್ದು, ಕಳೆದ ಎರಡು ದಿನಗಳ ಹಿಂದೆ ಬಿರುಕು ಬಿಟ್ಟಿದ್ದ ಸ್ಥಳ ಸುಮಾರು 20 ಅಡಿ ದೂರ ಸ್ಥಾನ ಪಲ್ಲಟವಾಗಿದೆ. ಇದೇ ಗ್ರಾಮದ ಕಾಫಿ ತೋಟ ಹಾಗೂ ಅಡಿಕೆ ತೋಟ ಕುಸಿತಕ್ಕೆ ತುತ್ತಾಗಿ ಗದ್ದೆಗೆ ಜಾರಿಬಿದ್ದು ಅಡಿಕೆ ಮರಗಳು ನೆಲಸಮವಾಗಿವೆ.
ಕಳೆದ ಒಂದು ವಾರದಿಂದ ದಕ್ಷಿಣ ಕೊಡಗಿನ ಬಹುತೇಕ ಭಾಗಗಳಿಗೆ ವಿದ್ಯುತ್ ಕಡಿತವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಇಲ್ಲದೇ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬಿರುನಾಣಿ, ಕೆ.ಕೆ.ಆರ್. ಮತ್ತು ಪರಕಟಗೇರಿಯ ಬಿ.ಎಸ್.ಎನ್.ಎಲ್ ಮೊಬೈಲ್ ಟವರ್ ಸೇವೆ ಸ್ಥಗಿತವಾಗಿದ್ದು, ವಿದ್ಯುತ್ ಕಡಿತವಾಗಿರುವದರಿಂದ ಇಲಾಖೆಯು ಜನರೇಟರ್ ಮೂಲಕ ಚಾಲನೆ ಮಾಡಲು ಡಿಸೇಲ್ ಇಲ್ಲ ಎಂದು ನಿರ್ಲಕ್ಷ್ಯ ವಹಿಸುತ್ತಿದ್ದು, ಆಪತ್ಕಾಲ ದಲ್ಲಿ ಜನರರಿಗೆ ಸೇವೆ ನೀಡಲು ಸಾಧ್ಯವಾಗದೆ ಬಿ.ಎಸ್.ಎನ್.ಎಲ್ ಇಲಾಖೆ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಈ ಭಾಗದಲ್ಲಿ ಏರ್‍ಟೆಲ್ ಸಂಸ್ಥೆಯ ದೂರವಾಣಿ ಸೇವೆಯನ್ನು ಅವಲಂಬಿಸಿದ್ದು, ಜನರಿಗೆ ಉಂಟಾಗಿರುವ ಹಾನಿ ಹಾಗೂ ಅಪಾಯದ ಸ್ಥಿತಿ ಅರಿಯಲು ಹಾಗೂ ನೆರವು ಕೇಳಲು ಬಿ.ಎಸ್.ಎನ್.ಎಲ್ ಸೇವೆಯನ್ನು ಹೊಂದಿರುವವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.
ಜನರಿಗೆ ಧೈರ್ಯ ಹೇಳಬೇಕು: ಬಿರುನಾಣಿ ಹಾಗೂ ಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಧಾರಕಾರ ಮಳೆಯಿಂದ ಭತ್ತದ ಗದ್ದೆ, ಕಾಫಿ ತೋಟ, ಕರಿಮೆಣಸು ಫಸಲು ಹಾನಿಯಾಗಿದೆ. ಬೃಹತ್ ಪ್ರಮಾಣದ ಭೂಕುಸಿತದಿಂದ ಜನರ ಆಸ್ತಿ ಪಾಸ್ತಿಗೆ ನಷ್ಟವಾಗಿದೆ. ರಸ್ತೆಗಳು ಸಹ ಕುಸಿದಿದ್ದು, ಜನರ ಬದುಕು ದುಸ್ತರವಾಗಿದೆ. ಬಿರುನಾಣಿ ವ್ಯಾಪ್ತಿಯಲ್ಲಿ ದಾಖಲೆಯ ಮಳೆ ಹಾಗೂ ಭಾರಿ ಪ್ರಮಾಣದಲ್ಲಿ ಭೂಕುಸಿತ ಉಂಟಾಗುತ್ತಿದ್ದರೂ, ಜಿಲ್ಲಾಡಳಿತದ ಯಾವದೇ ಅಧಿಕಾರಿಗಳು ಭೇಟಿ ನೀಡಿಲ್ಲ. ಜಿಲ್ಲಾಧಿಕಾರಿಗಳು ಈ ವ್ಯಾಪ್ತಿಗೆ ಭೇಟಿ ನೀಡಿ ನಷ್ಟದ ಬಗ್ಗೆ ಖುದ್ದು ಪರಿಶೀಲಿಸಿ ಧೈರ್ಯ ಹೇಳಬೇಕಾಗಿದೆ. ಅಲ್ಲದೆ ಜಿಲ್ಲಾಡಳಿತ ಈ ವ್ಯಾಪ್ತಿಯ ಜನರ ಬದುಕಿಗೆ ವಿಶೇಷ ನೆರವು ನೀಡಬೇಕು ಎಂದು ಬಿರುನಾಣಿ ಗ್ರಾ.ಪಂ. ಅಧ್ಯಕ್ಷ ಬಿ.ಕೆ. ನಾಣಯ್ಯ ಒತ್ತಾಯಿಸಿದ್ದಾರೆ.
-ಹರೀಶ್ ಮಾದಪ್ಪ