ಸಿದ್ದಾಪುರ, ಆ. 10: ದೇಶಾದ್ಯಂತ ನಡೆಯುತ್ತಿರುವ ಬಿಜೆಪಿಯ ಸದಸ್ಯತ್ವ ಅಭಿಯಾನದ ಅಂಗವಾಗಿ ಸಿದ್ದಾಪುರ ನಗರದ ಬಿಜೆಪಿ ಕಛೇರಿಯಲ್ಲಿ ಸ್ಥಾನೀಯ ಸಮಿತಿ ವತಿಯಿಂದ ಗಿಡ ನೆಡುವದರ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಡಿ. ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಸಿದ್ದಾಪುರ ಸ್ಥಾನೀಯ ಸಮಿತಿ ವಿಸ್ತಾರಕ್ ಆಗಿ ನಿಯುಕ್ತಿಗೊಂಡಿರುವ ಮಲ್ಲಂಡ ಮಧು ದೇವಯ್ಯ ಸಬ್ ಕಾ ಸಾಥ್, ‘ಸಬ್ ಕಾ ವಿಕಾಸ್’ ಎಂಬ ಧ್ಯೇಯ ವಾಕ್ಯದೊಂದಿಗೆ ಬಿಜೆಪಿ ಪಕ್ಷ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಮಿಸ್ಡ್ ಕಾಲ್ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಈಗಾಗಲೇ ಸದಸ್ಯತ್ವ ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನ ದೊರಕುತ್ತಿದೆ. ಭಾರತದ ಪ್ರತಿ ಗ್ರಾಮಗಳಲ್ಲೂ ಜನಸಂಪರ್ಕದೊಂದಿಗೆ ಬಿಜೆಪಿಯ ಸದಸ್ಯತ್ವ ನೀಡುವ ಗುರಿಯನ್ನು ಹೊಂದಿದೆ. ಅದೇ ರೀತಿ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಯಾನ ನಡೆಸಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸುವದ ರೊಂದಿಗೆ ಬಿಜೆಪಿ ಪಕ್ಷವನ್ನು ವಿಶ್ವದ ಅತ್ಯಂತ ಸದಸ್ಯ ಬಲ ಹೊಂದಿರುವ ಏಕೈಕ ಪಕ್ಷ ಎಂಬ ಗುರಿ ತಲಪುವದಕ್ಕೆ ಎಲ್ಲರೂ ಶ್ರಮಿಸಬೇಕೆಂದರು. ಪ್ರಧಾನಿ ನರೇಂದ್ರಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ನಡೆಯುವ ಈ ಸದಸ್ಯತ್ವ ಅಭಿಯಾನದಲ್ಲಿ ಪ್ರತಿ ಗ್ರಾಮದ ಯುವ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು. ಕಾರ್ಯಕ್ರಮದ ಭಾಗವಾಗಿ ಸಿದ್ದಾಪುರದ ಶ್ರೀ ಆದಿಚುಂಚನಗಿರಿ ಶಾಲೆಯಲ್ಲಿ ಗಿಡವನ್ನು ನೆಡಲಾಯಿತು. ಈ ಸಂದರ್ಭದ ಪಂದಿಕಂಡ ಅಶೋಕ್, ಅನಿಲ್ ಶೆಟ್ಟಿ, ಗಿರೀಶ್, ಭಜರಂಗದಳದ ಪ್ರವೀಣ್, ಆನಂದ, ಮಹಿಳಾ ಮೋರ್ಚಾದ ರೇಷ್ಮ, ಮಾಲ್ದಾರೆಯ ಜಯಂತ್, ಮಣಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.