ಪೊನ್ನಂಪೇಟೆ, ಆ. 10 : ಪೊನ್ನಂಪೇಟೆ ಶಿವಕಾಲೋನಿ, ತೊರೆಬೀದಿ, ನಿಸರ್ಗ ನಗರ ವ್ಯಾಪ್ತಿಯಲ್ಲಿ ಸೂರು ಕಳೆದುಕೊಂಡಿರುವ 21 ಸಂತ್ರಸ್ತರಿಗೆ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಶ್ರಯ ನೀಡಲಾಗಿದೆ.

ಪೊನ್ನಂಪೇಟೆಯ ಹಳ್ಳಿಗಟ್ಟು ಸೀತಾ ಕಾಲೋನಿಯ ಸುಮಾರು 60 ನಿರಾಶ್ರಿತರಿಗೆ ಹುದೂರು ಸರ್ಕಾರಿ ಶಾಲೆಯಲ್ಲಿ, ಹೊನ್ನಿಕೊಪ್ಪದ 24 ನಿರಾಶ್ರಿತರಿಗೆ ಕಿರುಗೂರು ಸರ್ಕಾರಿ ಶಾಲೆಯಲ್ಲಿ ಆಶ್ರಯ ನೀಡಲಾಗಿದೆ. ಪೊನ್ನಂಪೇಟೆ ನಿಸರ್ಗ ನಗರದ ರೋಸಿ ಎಂಬವರ ಮನೆ ಕುಸಿದು ಬಿದ್ದಿದೆ. ಅವರಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ. ತೊರೆಬೀದಿಯ ಕನಕ, ಸೋಮ ಮನೆ ಕಳೆದುಕೊಂಡಿದ್ದಾರೆ. ಶಿವ ಕಾಲೋನಿಯ ಸಾವಿತ್ರಿ ಎಂಬವರ ಮನೆಗೆ ನೀರು ನುಗ್ಗಿರುವದರಿಂದ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಪೊನ್ನಂಪೇಟೆ ಸರ್ಕಾರಿ ಕೈಗಾರಿಕೆ ಸಂಸ್ಥೆಯ ಕಟ್ಟಡದಲ್ಲಿ ಜಲ ಕಾಣಿಸಿಕೊಂಡು ಕೋಣೆಯೊಳಗೆ ತುಂಬಿಕೊಂಡಿರುವ ನೀರನ್ನು ಸಿಬ್ಬಂದಿ ಹೊರ ಹಾಕುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ನೀರು ಕೋಣೆಯೊಳಗೆ ಬರುತ್ತಿರುವದರಿಂದ ತೊಂದರೆಯಾಗಿದೆ. ದಿನಪೂರ್ತಿ ನೀರು ಹೊರ ಹಾಕುವ ಕೆಲಸದಲ್ಲಿ ಸಿಬ್ಬಂದಿ ತೊಡಗಿಕೊಂಡಿದ್ದಾರೆ.

- ಚನ್ನನಾಯಕ