ಸೋಮವಾರಪೇಟೆ, ಆ.10: ತಾಲೂಕಿನ ಸೂರ್ಲಬ್ಬಿ, ಕುಂಬಾರಗಡಿಗೆ, ಕಿಕ್ಕರಳ್ಳಿ, ಮಂಕ್ಯಾ, ಹರಗ ಸೇರಿದಂತೆ ಪುಷ್ಪಗಿರಿ, ಕೋಟೆಬೆಟ್ಟ ತಪ್ಪಲು ಗ್ರಾಮಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ನಾಟಿ ಮಾಡಿದ ಭತ್ತ ಗದ್ದೆ, ಕೃಷಿ ಭೂಮಿ ನೀರಿನಿಂದ ಆವೃತ್ತವಾಗಿವೆ.
ಭತ್ತ ಸಸಿ ಕೊಳೆಯುತ್ತಿವೆ. ಹೊಳೆ, ಕೊಲ್ಲಿಗಳ ಮೇಲೆ ಬರೆ ಕುಸಿದು, ನೀರಿನ ಹರಿವು ಮಾರ್ಗ ಬದಲಾಯಿಸಿರುವ ದರಿಂದ ದೊಡ್ಡ ಮಟ್ಟದ ಹಾನಿ ಸಂಭವಿಸಿದೆ.
ಮಂಕ್ಯಾ ಗ್ರಾಮದ ಪಳಂಗಪ್ಪ, ಚೀಯಣ್ಣ, ಸುಬ್ರಮಣಿ, ಸದಾ ಎಂಬವರ ಗದ್ದೆಗಳು ನೀರಿನಿಂದ ಅವೃತ್ತವಾಗಿವೆ. ಕುಂಬಾರಗಡಿಗೆ ಗ್ರಾಮದ ಪೂವಯ್ಯ, ಗಪ್ಪು ಅವರ ಮನೆ ಕುಸಿದಿದೆ. ಕಳೆದ ಹದಿನೈದು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲ. ಮೊಬೈಲ್ ನೆಟ್‍ವರ್ಕ್ ಇಲ್ಲ. ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಗ್ರಾಮಸ್ಥರು ಗ್ರಾಮ ತೊರೆಯಲು ಸುತರಾಂ ಒಪ್ಪುತ್ತಿಲ್ಲ ಎಂದು ಗರ್ವಾಲೆ ಪಂಚಾಯಿತಿ ಉಪಾಧ್ಯಕ್ಷ ಪಳಂಗಪ್ಪ ತಿಳಿಸಿದ್ದಾರೆ. ಮನೆ ಕಳೆದುಕೊಂಡ ಸಂತ್ರಸ್ತರಿಗೆ ಆಹಾರ ಪದಾರ್ಥಗಳ ಸರಬರಾಜು ಆಗಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಕಳೆದ 24 ಗಂಟೆಗಳಲ್ಲಿ ಸೋಮವಾರಪೇಟೆ ಕಸಬ ಹೋಬಳಿಗೆ 97.8ಮಿ.ಮೀ, ಶಾಂತಳ್ಳಿಗೆ 222.2, ಕೊಡ್ಲಿಪೇಟೆಗೆ 135.6, ಶನಿವಾರಸಂತೆಗೆ 129.4, ಸುಂಟಿಕೊಪ್ಪಕ್ಕೆ 81, ಕುಶಾಲನಗರಕ್ಕೆ 58 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.