ಸೋಮವಾರಪೇಟೆ, ಆ. 10: ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಹಲವು ರಸ್ತೆಗಳ ನಿರ್ವಹಣೆಗೆ ಸರ್ಕಾರ ಹಣ ಬಿಡುಗಡೆಗೊಳಿಸಿದರೂ, ಇಲಾಖೆ ಟೆಂಡರ್ ಪ್ರಕ್ರಿಯೆ ನಡೆಸದ ಹಿನ್ನೆಲೆ ರಸ್ತೆಗಳ ಇಕ್ಕೆಲಗಳಲ್ಲಿ ಕಾಡು ಬೆಳೆದು ಸಂಚಾರಕ್ಕೆ ದುಸ್ತರವಾಗಿದೆ.
ಇಲಾಖೆಗೆ ಸಂಬಂಧಿಸಿದ ಹೆದ್ದಾರಿಗಳ ನಿರ್ವಹಣೆಗಾಗಿ ವಾರ್ಷಿಕ ಟೆಂಡರ್ ಕರೆದು ಮಳೆಗಾಲಕ್ಕೂ ಮುನ್ನ ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ನಿರ್ಮಿಸಿ, ಗುಂಡಿಗಳನ್ನು ಮುಚ್ಚಬೇಕಿದೆ. ಆದರೆ, ಮಳೆಗಾಲ ಪ್ರಾರಂಭವಾಗಿ ಎರಡು ತಿಂಗಳು ಕಳೆಯುತ್ತಾ ಬಂದರೂ ಕಾಮಗಾರಿ ಪ್ರಾರಂಭಿಸಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಬಿ.ಪಿ. ಅನಿಲ್ ದೂರಿದ್ದಾರೆ.
ಇದರಿಂದಾಗಿ ಮಳೆ ನೀರು ರಸ್ತೆಯ ಮೆಲೆ ಹರಿಯುತ್ತಿದೆ. ಮತ್ತೊಂದೆಡೆ ರಸ್ತೆಯ ಎರಡೂ ಬದಿಯಲ್ಲಿ ಕುರುಚಲು ಕಾಡು ಬೆಳೆದು ರಸ್ತೆಯನ್ನು ಆಕ್ರಮಿಸಿವೆ. ಕೂಡಲೇ ಇಲಾಖೆ ರಸ್ತೆ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.