ಮಡಿಕೇರಿ, ಆ. 10: ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಅತಿವೃಷ್ಟಿಯಾಗುತ್ತಿದ್ದು, ಈ ಸಂದರ್ಭ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು ಮತ್ತು ಯಾವದೇ ಸನ್ನಿವೇಶಗಳನ್ನು ನಿಭಾಯಿಸಲು ಅರಣ್ಯ ಇಲಾಖೆ ಸನ್ನದ್ಧವಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕೆಲವೊಂದು ಮಾರ್ಗಸೂಚಿಗಳನ್ನು ನೀಡಲಾಗಿದೆ. ಅತಿವೃಷ್ಟಿಯಾಗಿರುವ ಪ್ರದೇಶಗಳಲ್ಲಿ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಕೇಂದ್ರ ಸ್ಥಾನದಲ್ಲಿಯೇ ಉಪಸ್ಥಿತರಿರತಕ್ಕದ್ದು. ಈ ಸಮಯದಲ್ಲಿ ಯಾವದೇ ರಜೆ ಮಂಜೂರು ಮಾಡತಕ್ಕದ್ದಲ್ಲ. ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಜಿಲ್ಲಾಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತಕ್ಕೆ ಬೇಕಾಗುವ ಎಲ್ಲಾ ನೆರವನ್ನು ನೀಡತಕ್ಕದ್ದು. ಇದೇ ರೀತಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯ ಸಹಾಯಕ ಆಯುಕ್ತರುಗಳೊಂದಿಗೆ ಮತ್ತು ವಲಯ ಅರಣ್ಯಾಧಿಕಾರಿಗಳು ತಹಶೀಲ್ದಾರ ರೊಂದಿಗೆ ಸಂಪರ್ಕದಲ್ಲಿದ್ದು ಇಲಾಖೆಯಿಂದ ಅಪೇಕ್ಷಿಸುವ ಎಲ್ಲಾ ನೆರವನ್ನು ನೀಡತಕ್ಕದ್ದು.
ಇಲಾಖೆಯಲ್ಲಿರುವ ಮರ ಕಡಿತಲೆಗೆ ಬೇಕಾಗುವ ಸಲಕರಣೆ ಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳತಕ್ಕದ್ದು, ಒಂದುವೇಳೆ ಹೆಚ್ಚುವರಿ ಸಲಕರಣೆಗಳ ಅವಶ್ಯಕತೆ ಇದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಸಲ್ಲಿಸಿ ಪಡೆದುಕೊಳ್ಳಬಹುದು. ಇಲಾಖೆಯಲ್ಲಿರುವ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಜಿಲ್ಲಾಡಳಿತದಿಂದ ಬೇಡಿಕೆ ಬಂದಲ್ಲಿ ನೀಡತಕ್ಕದ್ದು. ಇಲಾಖೆಯಲ್ಲಿರುವ ಬೋಟ್‍ಗಳನ್ನು ಸುಸ್ಥಿತಿಯಲ್ಲಿಟ್ಟು ಕೊಂಡು ಜಿಲ್ಲಾಡಳಿತದಿಂದ ಬೇಡಿಕೆ ಬಂದಲ್ಲಿ ನೀಡತಕ್ಕದ್ದು. ಅತಿವೃಷ್ಟಿಯಾಗಿರುವ ಅತೀಸೂಕ್ಷ್ಮ ಪ್ರದೇಶಗಳಲ್ಲಿ ಇರುವ ಸಿಬ್ಬಂದಿಗಳ ಸುರಕ್ಷತೆ ಕುರಿತು ಜಾಗ್ರತೆ ವಹಿಸುವದು. ಅತಿವೃಷ್ಟಿಯಿಂದ ಅರಣ್ಯ ಇಲಾಖೆಯ ಆಸ್ತಿಗಳಿಗೆ ಏನಾದರೂ ಹಾನಿಯಾಗಿ ದ್ದಲ್ಲಿ ಅವುಗಳನ್ನು ಸುಸ್ಥಿತಿಗೆ ತರಲು ಸೂಕ್ತ ಕ್ರಮ ತೆಗೆದುಕೊಳ್ಳತಕ್ಕದ್ದು.
ಜಿಲ್ಲಾಮಟ್ಟದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಜಿಲ್ಲಾಧಿಕಾರಿ ಗಳೊಂದಿಗೆ ಸಮನ್ವಯ ಸಾಧಿಸುವದು. ರಾಜ್ಯಮಟ್ಟದಲ್ಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಸಂಪನ್ಮೂಲ ಮತ್ತು ನಿರ್ವಹಣೆ) ರವರು ನೋಡಲ್ ಅಧಿಕಾರಿ ಯಾಗಿ ಕಾರ್ಯ ನಿರ್ವಹಿಸುವದು ಮತ್ತು ಈ ವಿಷಯದ ಕುರಿತು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗೆ ಕಾಲಕಾಲಕ್ಕೆ ಮಾಹಿತಿ ನೀಡುವದು. ಅತಿವೃಷ್ಟಿಯಿಂದ ಹಾನಿಯಾಗಿರುವ ಮನೆಗಳ ಪುನರ್ ನಿರ್ಮಾಣಕ್ಕೆ ಜಿಲ್ಲಾಡಳಿತದಿಂದ ಎಳೆಗಳಿಗಾಗಿ ಬೇಡಿಕೆ ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎಳೆಗಳು ದೊರಕುವ ಪ್ರದೇಶಗಳನ್ನು ಮುಂಚಿತವಾಗಿಯೇ ಗುರುತಿಸಿಟ್ಟುಕೊಳ್ಳುವದು. ಅತಿವೃಷ್ಟಿಯಾಗಿರುವ ಪ್ರದೇಶಗಳಲ್ಲಿ ಜಿಲ್ಲಾಡಳಿತದಿಂದ ಈಗಾಗಲೇ ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದಲ್ಲಿ, ಗಂಜಿ ಕೇಂದ್ರಗಳಿಗೋಸ್ಕರ ಉರುವಲಿಗಾಗಿ ಜಿಲ್ಲಾಡಳಿತದಿಂದ ಬೇಡಿಕೆ ಬಂದಲ್ಲಿ ಲಭ್ಯ ಉರುವಲುಗಳನ್ನು ಪ್ರಚಲಿತ ದರಗಳಂತೆ ಸಿ.ಆರ್.ಎಫ್. ಅನುದಾನ ಬಳಸಿಕೊಂಡು ಒದಗಿಸುವದು. ಅಲ್ಲದೆ ಜಿಲ್ಲಾಡಳಿತ ಇನ್ನಿತರ ಸಹಕಾರ ಕೋರಿದಲ್ಲಿ ಸಂಪೂರ್ಣ ಸಹಕಾರ ನೀಡಲು ಸೂಚನೆ ನೀಡಲಾಗಿದೆ.