ಸೋಮವಾರಪೇಟೆ,ಆ.9: ತಾಲೂಕಿನಾದ್ಯಂತ ವಾಯು-ವರುಣನಾರ್ಭಟ ಮುಂದುವರೆದಿದ್ದು, ಗ್ರಾಮೀಣ ಭಾಗದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಆರ್ಭಟಕ್ಕೆ ಅಲ್ಲಲ್ಲಿ ಹಾನಿಗಳು ಮುಂದುವರೆದಿದ್ದು, ಕೃಷಿ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ.
ತಾಲೂಕಿನ ಪಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ದಿನದ 24 ಗಂಟೆಗಳ ಕಾಲವೂ ಎಡೆಬಿಡದೆ ಮಳೆ ಸುರಿಯುತ್ತಿದೆ. ಶಾಂತಳ್ಳಿ ಗ್ರಾಮದಲ್ಲಿ ನಾಲೆ ಒಡೆದು 15 ಎಕರೆ ಗದ್ದೆಯಲ್ಲಿ ನಾಟಿ ಮಾಡಲಾಗಿದ್ದ ಭತ್ತದ ಪೈರು ಕೊಚ್ಚಿಹೋಗಿದೆ.
ಚೆಟ್ಟಳ್ಳಿ - ಹಿರಿಸಾವೆ ರಾಜ್ಯ ಹೆದ್ದಾರಿಯ ಬಿ.ಡಿ.ಚಂಗಪ್ಪ ಎಂಬವರ ಮನೆಯ ಬರೆ ಕುಸಿದಿದೆ. ಹರಗ ಗ್ರಾಮದ ಕುಮಾರಸ್ವಾಮಿ, ಜಗದೀಶ್, ರಾಮಕೃಷ್ಣ, ಪರಮೇಶ್ ಎಂಬವರುಗಳ ಮನೆಗಳಿಗೆ ಹಾನಿಯಾಗಿದ್ದು, ಸೂರ್ಲಬ್ಬಿ ಗ್ರಾಮದ ಕೆ.ಎಸ್.ಜಯಂತಿ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿರುವ ಬಗ್ಗೆ ತಾಲೂಕು ಕಚೇರಿಗೆ ವರದಿಯಾಗಿದೆ.
ಸೋಮವಾರಪೇಟೆ ಪಟ್ಟಣ ಹೊರತುಪಡಿಸಿ ಗ್ರಾಮೀಣ ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುವಂತಾಗಿದೆ. ಗ್ರಾಮೀಣ ಭಾಗದಲ್ಲಿ ಟಿ.ವಿ.ಗಳಿಲ್ಲದೆ ಹೊರ ಪ್ರಪಂಚದ ಮಾಹಿತಿಯಿಲ್ಲದಂತಾಗಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನರ ಮೊಬೈಲ್ ಫೋನ್‍ಗಳು ಸ್ವಿಚ್‍ಆಫ್ ಆಗಿವೆ.
ಗ್ರಾಮೀಣ ಭಾಗದ ಹೊಳೆ ತೊರೆಗಳು ಉಕ್ಕಿ ಹರಿಯುತ್ತಿದ್ದು ಕೃಷಿ ಭೂಮಿಗೆ ಹಾನಿಯಾಗಿದೆ. ನಾಟಿ ಗದ್ದೆಗಳು ಜಲಾವೃತಗೊಂಡಿದ್ದು, ಗದ್ದೆಯಲ್ಲಿ ಮರುಳು-ಮಣ್ಣು ಶೇಖರಣೆಗೊಳ್ಳುತ್ತಿದೆ. ವಿದ್ಯುತ್ ತಂತಿ-ಕಂಬಗಳ ಮೇಲೆ ಮರ ಬಿದ್ದಿರುವ ಪರಿಣಾಮ ಗ್ರಾಮೀಣ ಭಾಗಗಳು ಕಾರ್ಗತ್ತಲಲ್ಲಿ ಮುಳುಗಿವೆ.
ಇದರೊಂದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ವಿದ್ಯುತ್ ಕಂಬಗಳು ಧರೆಗುರುಳಿರುವ ಪರಿಣಾಮ, ಮಳೆಯ ನೀರನ್ನೇ ಕುಡಿಯುವ ಸನ್ನಿವೇಶ ನಿರ್ಮಾಣವಾಗಿದೆ.
ಗ್ರಾಮೀಣ ಪ್ರದೇಶದ ರಸ್ತೆಗಳ ಮೇಲೆ ನೂರಾರು ಮರಗಳು, ಮರದ ಕೊಂಬೆಗಳು ಮುರಿದು ಬೀಳುತ್ತಿದ್ದು, ಎಚ್ಚರಿಕೆಯಿಂದ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಭಾರೀ ಮಳೆಗೆ ನದಿ ತೊರೆಗಳು ತುಂಬಿಕೊಳ್ಳುತ್ತಿದ್ದು, ಪಟ್ಟಣದ ಆನೆಕೆರೆ, ಯಡೂರುಕೆರೆ, ಚೌಡ್ಲು ಕೆರೆಗಳು ಮೈದುಂಬುತ್ತಿವೆ.
ಪಟ್ಟಣದ ಲೋಡರ್ಸ್ ಕಾಲೋನಿಯಲ್ಲಿ ಮನೆ ಕುಸಿಯುವ ಅಪಾಯ ಇರುವದರಿಂದ ಗಿರಿಜ ಅವರ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಟರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತೋಳೂರುಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಸಿಂಗನಳ್ಳಿ ಗ್ರಾಮದ ಪುಷ್ಪ ಹೂವಯ್ಯ ಎಂಬವರ ಮನೆಯ ಸನಿಹವಿದ್ದ ಬರೆ ಕುಸಿತಗೊಂಡಿದ್ದು, ಮನೆಯೊಳಗೆ ಮಣ್ಣು ಶೇಖರಣೆಗೊಂಡಿದೆ. ಸ್ಥಳಕ್ಕೆ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಭೇಟಿ ನೀಡಿ ಪರಿಶೀಲಿಸಿದ್ದು, ಕುಟುಂಬವನ್ನು ಸ್ಥಳಾಂತರ ಮಾಡಲಾಗಿದೆ.