ಸಿದ್ದಾಪುರ, ಆ. 9: ಮಹಾಮಳೆಗೆ ಸಿಲುಕಿ ಪ್ರವಾಹದಿಂದಾಗಿ ಕರಡಿಗೋಡು - ಗುಹ್ಯ ಗ್ರಾಮಗಳಲ್ಲಿ 35ಕ್ಕೂ ಅಧಿಕ ಮನೆಗಳು ಕುಸಿದಿದೆ. ನೂರಾರು ಮನೆಗಳು ಜಲಾವೃತಗೊಂಡಿದ್ದು, ಮನೆಗಳು ಹಾನಿಯಾಗಿದೆ. ಸಿದ್ದಾಪುರದ ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು; ನದಿದಡದ ನಿವಾಸಿಗಳ ನೆಮ್ಮದಿ ಹಾಳು ಮಾಡಿದೆ.

ಮಹಾಮಳೆಯಿಂದಾಗಿ ಕರಡಿಗೋಡುವಿನಲ್ಲಿ 28ಕ್ಕೂ ಅಧಿಕ ಮನೆಗಳು ಸಂಪೂರ್ಣ ಮುಳುಗಡೆಗೊಂಡಿದೆ. ಸಿದ್ದಾಪುರ ವ್ಯಾಪ್ತಿಯಲ್ಲಿ 35ಕ್ಕೂ ಅಧಿಕ ಮನೆಗಳು ಕುಸಿದಿದ್ದು, ಮನೆಯ ಸಾಮಾಗ್ರಿಗಳು ನೀರು ಪಾಲಾಗಿದೆ. ಗುಹ್ಯ ಗ್ರಾಮದ ಕಕ್ಕಟ್ಟುಕಾಡುವಿನ ನಿವಾಸಿಗಳಾದ ಸದಾ, ರವಿ, ರಾಜೇಶ್, ದಿನೇಶ್, ಹರೀಶ್ ಎಂಬವರ ಮನೆಗಳು ಸಂಪೂರ್ಣ ನೆಲಕಚ್ಚಿದೆ. ಮನೆಯ ಸಾಮಾಗ್ರಿಗಳು ಪ್ರವಾಹಕ್ಕೆ ಸಿಲುಕಿ ನದಿ ಪಾಲಾಗಿದೆ. ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿರಾಶ್ರಿತರನ್ನು ಪರಿಹಾರ ಕೇಂದ್ರಕ್ಕೆ ತರಲಾಗಿದೆ. ಕೂಡುಗದ್ದೆಯಲ್ಲಿ ಹಲವಾರು ಮನೆಗಳು ಪ್ರವಾಹಕ್ಕೆ 50ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ. ಕರಡಿಗೋಡುವಿನಲ್ಲಿ ಅಂಥೋಣಿ ಹಾಗೂ ಅನಿಲ್ ಎಂಬವರ ಮನೆಯು ಕುಸಿದಿರುತ್ತದೆ. 200ಕ್ಕೂ ಅಧಿಕ ಮನೆಗಳು ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು ರಸ್ತೆ ಸಂಪರ್ಕ ಸೇರಿದಂತೆ ದೂರವಾಣಿಗಳ ಸಂಪರ್ಕ ಕಡಿತಗೊಂಡಿವೆ.

ಕೆಲವರು ಮನೆ ತೊರೆಯಲು ನಿರಾಕರಿಸುತ್ತಿದ್ದು; ಇದರಿಂದಾಗಿ ಸಮಸ್ಯೆ ಆಗುತ್ತಿದೆಯೆಂದು ಕಂದಾಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಬರಡಿಯ ಕುಂಬಾರ ಗುಂಡಿಯಲ್ಲಿ 10 ಮನೆಗಳು ಪ್ರವಾಹಕ್ಕೆ ಸಿಲುಕಿ ಕುಸಿದಿದೆ. ನೆಲ್ಯಹುದಿಕೇರಿಯ ಚರ್ಚ್‍ಸೈಡ್ ಭಾಗದಲ್ಲಿ ಏಕಾಏಕಿ ಪ್ರವಾಹ ಏರಿಕೆಯಾಗಿ 10ಕ್ಕೂ ಅಧಿಕ ಕುಟುಂಬಗಳಿಗೆ ಗ್ರಾಮಲೆಕ್ಕಿಗ ಸಂತೋಷ್ ಹಾಗೂ ಕಂದಾಯ ಪರಿವೀಕ್ಷಕ ಮಧುಸೂದನ್ ದೋಣಿಯ ವ್ಯವಸ್ಥೆ ಕಲ್ಪಿಸಿ ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ದಾರೆ.

9 ಮಂದಿ ರಕ್ಷಣೆ

ಕೊಂಡಂಗೇರಿಯ ನದಿದಡದ ಸಮೀಪದಲ್ಲಿರುವ ಕಟ್ಟಡವೊಂದರಲ್ಲಿ ಪ್ರವಾಹದಿಂದ ತಪ್ಪಿಸಿಕೊಳ್ಳಲು ಕಟ್ಟಡವೊಂದರ ಮೇಲೆ 9 ಮಂದಿ ಹತ್ತಿ ನಿಂತಿದ್ದರು. ಇದರಿಂದಾಗಿ 9 ಮಂದಿ ಪೈಕಿ ಓರ್ವ ಗ್ರಾಮಲೆಕ್ಕಿಗ ಜಯಪ್ಪ ಬಣಕಾರ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಗ್ರಾಮಲೆಕ್ಕಿಗ ರಕ್ಷಣೆಗೆ ನುರಿತ ಈಜುಗಾರ ತಂಡವನ್ನು ಕಳಿಸಿ; 9 ಮಂದಿಯನ್ನು ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾದರು.

ಬಿಜೆಪಿ ತಂಡ ಭೇಟಿ

ಪ್ರವಾಹ ಪೀಡಿತ ಪ್ರದೇಶಗಳಾದ ನೆಲ್ಯಹುದಿಕೇರಿ ಹಾಗೂ ಕರಡಿಗೋಡು ಪರಿಹಾರ ಕೇಂದ್ರಕ್ಕೆ ಬಿಜೆಪಿ ಮುಖಂಡರುಗಳಾದ ಕೆ.ಎಸ್. ಈಶ್ವರಪ್ಪ, ಸಿ.ಟಿ. ರವಿ, ವಿ. ಸೋಮಣ್ಣ ಹಾಗೂ ಸಂಸದ ಪ್ರತಾಪ್‍ಸಿಂಹ ಭೇಟಿ ನೀಡಿ ಮಾಹಿತಿ ಪಡೆದರು. ಈ ಸಂದರ್ಭ ಮಾತನಾಡಿದ ಅವರು ಮನೆ ಕಳೆದುಕೊಂಡವರಿಗೆ ಸರ್ಕಾರದ ವತಿಯಿಂದ ಮನೆ ನಿರ್ಮಿಸಿಕೊಡಲಾಗುವದು ಎಂದರು. ಸರ್ಕಾರ ಸೂಚಿಸಿದ ಜಾಗಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿದರು. ಈ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಬಿಜೆಪಿ ಮುಖಂಡರಾದ ವಿ.ಕೆ. ಲೋಕೇಶ್, ಅನಿಲ್‍ಶೆಟ್ಟಿ ಇನ್ನಿತರರು ಹಾಜರಿದ್ದರು.

-ಚಿತ್ರ, ವರದಿ : ವಾಸು