ಮಡಿಕೇರಿ, ಆ. 9: ನಾಪೋಕ್ಲು ಸಮೀಪದ ಮೂರ್ನಾಡು ವಿದ್ಯಾಸಂಸ್ಥೆ ಯಲ್ಲಿ ಜಾನಪದ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಆಟಿ ಊಟ ವಿಶೇಷ ಕಾರ್ಯಕ್ರಮ ವನ್ನು ಜಿಲ್ಲಾ ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್ ಉದ್ಘಾಟಿಸಿದರು.
ಮದ್ದುಸೊಪ್ಪಿನ ಪಾಯಸ, ಕಳಲೆಯ ತಿನಿಸುಗಳು, ಪತ್ರೊಡೆ, ಕಡುಂಬುಟ್ಟು, ವಿವಿಧ ಮಾಂಸದ ಖಾದ್ಯಗಳು ಹೀಗೆ ಹತ್ತು ಹಲವು ವೈವಿಧ್ಯಮಯ ತಿನಿಸುಗಳು ಆಹಾರ ಪ್ರಿಯರ ಬಾಯಲ್ಲಿ ನೀರೂರಿಸಿದವು. ಜಿಲ್ಲೆಯ ಕಕ್ಕಡ ಮಾಸದ ತಂಪಾದ ಹವೆಗೆ ಶರೀರಕ್ಕೆ ಉಷ್ಣತೆ ಹೆಚ್ಚಿಸುವ ಖಾದ್ಯಗಳ ತಯಾರಿಗೆ ಮಹಿಳೆಯರು ಗಮನ ನೀಡಿದರು.
ಮುನೀರ್ ಅಹಮದ್ ಮಾತನಾಡಿ, ಮನುಷ್ಯನ ಜೀವನ ಶೈಲಿ ಬದಲಾದಂತೆ ಪ್ರಕೃತಿಯು ಬದಲಾಗುತ್ತದೆ. ಮನುಷ್ಯನಿಂದ ಪ್ರಕೃತಿ ಕಲುಷಿತಗೊಳ್ಳುತ್ತಿರುವದು ದುರಂತವಾಗಿದೆ ಎಂದರು.
ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟೀರ ಮಾದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಖಜಾಂಚಿ ಸುಬ್ರಮಣಿ, ಸಾಹಿತಿ ಕಿಗ್ಗಾಲು ಗಿರೀಶ್, ಜಾನಪದ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷ ಎಸ್.ಡಿ. ಪ್ರಶಾಂತ್ ನಿರ್ದೇಶಕರಾದ ಎ.ಎಂ. ಶೈಲ, ನಂದೇಟಿರ ರಾಜಾ ಮಾದಪ್ಪ, ಈರಮಂಡ ಸೋಮಣ್ಣ, ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕ್ಕಿ, ಮುಖ್ಯ ಶಿಕ್ಷಕಿ ಎ.ಎಸ್. ರಶ್ಮಿ, ಉಪನ್ಯಾಸಕರು ಹಾಗೂ ಶಿಕ್ಷಕವೃಂದದವರು ಇದ್ದರು.
ಮೂರ್ನಾಡು ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ವರ್ಗಾವಣೆ ಹೊಂದಿದ ನಂಜೇಗೌಡ ಅವರನ್ನು ಸನ್ಮಾನಿಸಲಾಯಿತು.