ಕೂಡಿಗೆ, ಆ. 9: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಕುಶಾಲ ನಗರ ಜನಜೀವನ ಅಸ್ತವ್ಯಸ್ಥವಾಗಿದೆ. ಕುಶಾಲನಗರದ ಹಲವು ಬಡಾವಣೆಗಳು ಜಲಾವೃತ ಗೊಂಡಿದ್ದು, ಮಳೆಯ ಆವಾಂತರ ಗಳನ್ನು ಖುದ್ದು ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ಮಳೆ ಹಾನಿಯ ವರದಿ ನೀಡಲು ಮುಖ್ಯಮಂತ್ರಿ ರಚಿಸಿದ್ದ ಪ್ರಕೃತಿ ವಿಕೋಪ ಪರಿಹಾರ ಪರಿಶೀಲನೆಯ ಬಿಜೆಪಿ ಶಾಸಕರ ತಂಡ ಕುಶಾಲನಗರದ ಕಾವೇರಿ ನದಿ ದಂಡೆಯ ತಗ್ಗು ಪ್ರದೇಶಗಳಲ್ಲಿನ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಪರಿಸ್ಥಿತಿಯನ್ನು ಅವಲೋಕಿಸಿತು.

ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಕೇಂದ್ರ ಸಚಿವರಾದ ಸದಾನಂದ ಗೌಡ, ಚಿಕ್ಕಮಂಗಳೂರು ಶಾಸಕ ಸಿ.ಟಿ. ರವಿ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಸಂಸದ ಪ್ರತಾಪ ಸಿಂಹ ಮೊದಲಾದವರು ಜಲಾವೃತಗೊಂಡ ಸಾಯಿ ಬಡಾವಣೆ ಕುವೆಂಪು ಬಡಾವಣೆ ಇಂದಿರಾ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಸಿ.ಟಿ. ರವಿ ಹಾಗೂ ಪ್ರತಾಪ್ ಸಿಂಹ ಕಾವೇರಿ ಪ್ರವಾಹದಿಂದ ಆಗಿರುವ ಸ್ಥಿತಿಗತಿಗಳನ್ನು ಪರಿಶೀಲಿಸಿ ನಷ್ಟದ ವಿವರಗಳನ್ನು ಪಡೆದು ಸರ್ಕಾರಕ್ಕೆ ಸಲ್ಲಿಸಿ ಅಗತ್ಯ ಪರಿಹಾರ ಕಾರ್ಯ ಗಳನ್ನು ನಡೆಸುವ ಬಗ್ಗೆ ಭರವಸೆ ನೀಡಿದರು. ಸೂರು ವಂಚಿತರನ್ನು ಆಸರೆ ಕೇಂದ್ರದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವ ಬಗ್ಗೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತ ಸನ್ನದ್ಧವಾಗಿರುವ ಬಗ್ಗೆ ಹೇಳಿದರು.

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ಪಕ್ಷದ ಪ್ರಮುಖರಾದ ಕೆ.ಜಿ.ಮನು, ಕೆ.ಆರ್.ಮಂಜುಳಾ, ಕೃಷ್ಣಪ್ಪ, ಶಿವಾಜಿ, ಪಂಚಾಯತಿ ಸದಸ್ಯರಾದ ಜಯವರ್ಧನ, ಪಂಚಾಯತಿ ಮುಖ್ಯಾಧಿಕಾರಿ ಸುಜಯ್ ಕುಮಾರ್ ಮೊದಲಾದವರಿದ್ದರು.