ಕುಶಾಲನಗರ, ಆ. 9: ಕುಶಾಲನಗರ ಸರಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿದ್ದರು. ಕಾಲೇಜಿನ ಬಗ್ಗೆ ಇತ್ತೀಚೆಗೆ ‘ಶಕ್ತಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿದ್ದು, ವರದಿಗೆ ಸ್ಪಂದಿಸಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕಾಲೇಜಿನ ಅಧಿಕಾರಿಗಳನ್ನು ಕರೆಸಿ ಮಾಹಿತಿ ಪಡೆದರು. 252 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಲಭ್ಯವಿದ್ದು, ಇದುವರೆಗೆ ಕೇವಲ 102 ವಿದ್ಯಾರ್ಥಿಗಳು ಆಯ್ಕೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆ ಆಡಳಿತ ವ್ಯವಸ್ಥೆ ಕುಸಿದಿರುವ ಬಗ್ಗೆ ದೂರುಗಳು ಬಂದಿರುವದಾಗಿ ಶಾಸಕರು ಹೇಳಿದರು. ಕಾಲೇಜಿನ ಆಡಳಿತಾಧಿಕಾರಿ ಲಿಂಗರಾಜು ಮತ್ತು ಹಿರಿಯ ಉಪನ್ಯಾಸಕರೊಂದಿಗೆ ಚರ್ಚಿಸಿದ ಶಾಸಕರು ನಂತರ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ಕಾಲೇಜಿನ ಉತ್ತಮ ಆಡಳಿಯ ವ್ಯವಸ್ಥೆಗೆ ಪ್ರಾಂಶುಪಾಲರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇದೇ ಸಂದರ್ಭ ಕಾಲೇಜಿನ ವಿದ್ಯಾರ್ಥಿಗಳು ಶೇ. 100 ರಷ್ಟು ಫಲಿತಾಂಶ ಗಳಿಸಿರುವ ಬಗ್ಗೆ ಶಾಸಕ ಅಪ್ಪಚ್ಚು ರಂಜನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಜಿ.ಪಂ. ಸದಸ್ಯೆ ಮಂಜುಳಾ, ಕುಶಾಲನಗರ ಸರಕಾರಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್, ನಗರ ಬಿಜೆಪಿ ಅಧ್ಯಕ್ಷ ಕೆ.ಜಿ. ಮನು, ಎಂ.ಡಿ. ಕೃಷ್ಣಪ್ಪ, ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಮೃತ್‍ರಾಜ್, ಪಂಚಾಯಿತಿ ಪ್ರತಿನಿಧಿಗಳಾದ ಭಾಸ್ಕರ್ ನಾಯಕ್, ರುದ್ರಾಂಬಿಕೆ, ಪುಷ್ಪ, ಕಾಲೇಜು ಉಪನ್ಯಾಸಕ ವೃಂದದವರು ಇದ್ದರು.