ವೀರಾಜಪೇಟೆ, ಆ. 8: ವೀರಾಜಪೇಟೆ ವಿಭಾಗಕ್ಕೆ ನಿನ್ನೆಯಿಂದಲೇ ಭಾರೀ ಮಳೆ ಚುರುಕುಗೊಂಡಿದ್ದು ಕಳೆದ 24ಗಂಟೆಗಳ ಅವಧಿಯಲ್ಲಿ ಒಟ್ಟು 186.4 ಮಿ.ಮೀ(7.6 ಇಂಚುಗಳಷ್ಟು) ಮಳೆ ಸುರಿದ ಪರಿಣಾಮ ಬೇತರಿ ಗ್ರಾಮದ ಕಾವೇರಿ ಹೊಳೆ ಪೂರ್ಣವಾಗಿ ಭರ್ತಿಯಾಗಿದ್ದು, ಇಂದು ಬೆಳಗಿನ ಜಾವ 5ಗಂಟೆಯ ಸಮಯದಲ್ಲಿ ಸೇತುವೆಯ ಮೇಲೆ ನಾಲ್ಕು ಅಡಿಗಳಷ್ಟು ನೀರು ಹರಿದುದರಿಂದ ಮಡಿಕೇರಿ ವೀರಾಜಪೇಟೆ ನೇರ ಸಂಪರ್ಕ ಕಡಿತಗೊಂಡಿದೆ. ಬೇತರಿ ಸೇತುವೆ ನೀರಿನಿಂದ ಅಪಾಯದ ಅಂಚಿನಲ್ಲಿರುವದರಿಂದ ಯಾವದೇ ವಾಹನಗಳು ಸೇತುವೆ ಬಳಿಯು ಬಾರದಂತೆ ಇಲ್ಲಿನ ಗ್ರಾಮಾಂತರ ಪೊಲೀಸರು ಸರ್ಪ ಕಾವಲು ಹಾಕಿದ್ದಾರೆ.
ಬೇತರಿ ಗ್ರಾಮದ ಕಾವೇರಿ ಹೊಳೆಯ ಸಮೀಪದಲ್ಲಿರುವ ತಂಡಾಗುಂಡಿ ಸೇತುವೆಯು ನೀರಿನಿಂದ ಭರ್ತಿಯಾಗಿದ್ದು, ಇದರ ಹೆಚ್ಚುವರಿ ನೀರು ಪಕ್ಕದ ಖಾಲಿ ಜಾಗವನ್ನು ಆವರಿಸಿದೆ. ವೀರಾಜಪೇಟೆಯಿಂದ 4ಕಿ.ಮಿ. ಅಂತರದಲ್ಲಿರುವ ಕದನೂರು ಕಾವೇರಿಯ ಉಪಹೊಳೆ ನೀರಿನಿಂದ ಭರ್ತಿಯಾಗಿದ್ದು ಹೆಚ್ಚುವರಿ ನೀರು ಪಕ್ಕದ ಖಾಲಿ ಜಾಗ ಗದ್ದೆಯನ್ನು ಆವರಿಸಿದೆ. ಇಲ್ಲಿಯೂ ರಸ್ತೆ ಮೇಲೆ ನೀರು ಹರಿಯುತ್ತಿರುವದರಿಂದ ಕದನೂರು ವೀರಾಜಪೇಟೆ ರಸ್ತೆ ಸಂಪರ್ಕ ಇಂದು ಬೆಳಗಿನ 8ಗಂಟೆಗೆ ಬಂದ್ ಆಗಿದ್ದು ಕಡಂಗ, ನಾಪೋಕ್ಲು ವಿವಿಧೆಡೆಗಳಿಗೆ ತೆರಳುವ ವಾಹನಗಳು ಬಳಸು ದಾರಿಯನ್ನು ಅವಲಂಭಿಸಬೇಕಾಯಿತು.
ಬೇತರಿ ಗ್ರಾಮದ ಸೇತುವೆಯ ಮೇಲೆ ಕಾವೇರಿಹೊಳೆಯ ನೀರು ಹರಿದುದರ ಪರಿಣಾಮವಾಗಿ ಹೆಮ್ಮಮಾಡು ಗ್ರಾಮದ ಸುಮಾರು 90 ಮನೆಗಳು, ಬೇತರಿ ಗ್ರಾಮದ ಸುಮಾರು 60ಮನೆಗಳು ನೀರಿನಿಂದ ಜಲಾವೃತ ಗೊಂಡು ಕುಟುಂಬಗಳು ನಿನ್ನೆ ದಿನವೇ ತನ್ನ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಈ 150 ಕುಟುಂಬಗಳಿಗೆ ಅಧಿಕಾರಿಗಳು ಯಾವದೇ ಆಶ್ರಯ ನೀಡಿಲ್ಲ ಎಂದು ಸಂತ್ರಸ್ತರು ಶಕ್ತಿಯೊಂದಿಗೆ ದೂರಿಕೊಂಡಿದ್ದಾರೆ.
ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿಜಯನಗರ, ಸೆಲ್ವನಗರ, ಸುಭಾಷ್‍ನಗರ, ಶಾಂತಿನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದನ್ನು ಪಟ್ಟಣ ಪಂಚಾಯಿತಿ ವತಿಯಿಂದ ತೆರವುಗೊಳಿಸಲಾಯಿತು. ವೀರಾಜಪೇಟೆ ಮಗ್ಗುಲ ಗ್ರಾಮದಲ್ಲಿರುವ ದಂತ ವೈದ್ಯ ಕಾಲೇಜಿನ ಬಳಿ ತಡೆಗೋಡೆ ಕುಸಿದಿದೆ. ಅಯ್ಯಪ್ಪ ಬೆಟ್ಟದಲ್ಲಿ ಶನೀಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಕುಸಿದಿದೆ. ಮಲೆತಿರಿಕೆ ಬೆಟ್ಟದಲ್ಲಿ ಪುಷ್ಪ ಎಂಬವರ ಮನೆ ಮಣ್ಣು ಕುಸಿದು ಜಖಂಗೊಂಡಿದೆ. ಇಲ್ಲಿನ ಮೂರ್ನಾಡು ರಸ್ತೆಯ ಸೆಸ್ಕಾಂ ಕಚೇರಿ ಬಳಿ ಬೆಳಿಗ್ಗೆ ಮರವೊಂದು ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದ್ದನ್ನು ತೆರವುಗೊಳಿಸಲಾಯಿತು. ನೆಹರೂನಗರ, ಮಲೆತಿರಿಕೆಬೆಟ್ಟಗಳಲ್ಲಿ ಅನೇಕ ಕಡೆಗಳಲ್ಲಿ ಮಣ್ಣು ಕುಸಿದಿದ್ದರೂ ಸಂಚಾರಕ್ಕೆ ಯಾವದೇ ಅಡಚಣೆ ಉಂಟಾಗಿಲ್ಲ. ಮಲೆತಿರಿಕೆ ಬೆಟ್ಟದ ಎಚ್.ಕೆ.ಮಂಜು, ಮುರುಗ, ಮಹದೇವಿ, ನಾರಾಯಣ ಹಾಗೂ ನೆಹರೂನಗರದ ಸರೋಜ, ಕ್ಲಿಫರ್ಡ್ ಎಂಬವರ ಮನೆಗಳು ಜಖಂಗೊಂಡಿವೆ.
ಆರ್ಜಿ ಗ್ರಾಮದ ಅನಾಥಾಶ್ರಮದ ಬಳಿಯ ಸೇತುವೆಯ ಮೇಲೆ ಸುಮಾರು 3ಅಡಿಗಳಷ್ಟು ನೀರು ಹರಿದುದರಿಂದ ಕೆಲವು ಗಂಟೆಗಳ ಕಾಲ ಕೊಡಗು ಪೆರುಂಬಾಡಿ ಗೇಟ್ ತನಕ ರಸ್ತೆ ಸಂಚಾರ ಬಂದ್ ಆಗಿತ್ತು. ಭಾರೀ ಮಳೆಗೆ ಕೊಡಗು ಕೇರಳ ಗಡಿ ಪ್ರದೇಶವಾದ ಪೆರುಂಬಾಡಿಯಿಂದ 7ಕಿ.ಮೀ. ಅಂತರದ ಹನುಮಾನ್‍ಪಾಲ ಎಂಬಲ್ಲಿ ಬೆಟ್ಟದ ಬರೆ ಕುಸಿದಿದ್ದು ಮಣ್ಣಿನ ಜೊತೆಯಲ್ಲಿ ಮರವೂ ರಸ್ತೆಗೆ ಉರುಳಿದೆ. ಅರಣ್ಯ ಇಲಾಖೆ ಮರವನ್ನು ತೆರವುಗೊಳಿಸಿದೆ.
ನಗರದ ಮಾಂಸ ಮಾರುಕಟ್ಟೆಯ ಬಳಿಯಲ್ಲಿರುವ ರಾಜ ಕಾಲುವೆ ತುಂಬಿ ಹರಿಯುತ್ತಿದ್ದು, ವೀರಾಜಪೇಟೆ-ಗೊಣಿಕೊಪ್ಪ ರಸ್ತೆಯ ಮೇಲೆ ಎರಡು ಅಡಿ ಎತ್ತರದಲ್ಲಿ ನೀರು ಸಂಗ್ರಹಗೊಂಡಿದೆ. ರಸ್ತೆಯು ಸಂಪೂರ್ಣ ಜಲಾವೃತಗೊಂಡು ಸಂಚಾರವು ಕಷ್ಟ ಸಾದ್ಯವಾಗಿದೆ. ರಸ್ತೆಯಲ್ಲಿ ಭಾರಿ ವಾಹನಗಳು ಮಾತ್ರ ಸಂಚಾರ ಮಾಡುತ್ತಿದ್ದು ಲಘು ವಾಹನಗಳು ಸಂಚರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ವೀರಾಜಪೇಟೆ ನಗರದ ಗ್ರಾಮಾಂತರ ಪ್ರದೇಶವಾದ ಕೆ. ಬೊಯಿಕೇರಿ- ಕೊಟ್ಟೊಳ್ಳಿ ರಸ್ತೆಯ ಕೀರು ಹೊಳೆಯು ತುಂಬಿ ಹರಿಯುತ್ತಿದ್ದು, ಸೇತುವೆಯ ಮೇಲ್ಬಾಗದಲ್ಲಿ ನೀರು ಹರಿಯುತಿರುವದರಿಂದ ಸಂಚಾರವು ಸ್ಥಗಿತಗೊಂಡಿದೆ ಅಲ್ಲದೆ ನೀರಿನ ಮಟ್ಟವು ಗರಿಷ್ಟ ಪ್ರಮಾಣದಲ್ಲಿ ಹರಿಯುತಿದ್ದು ಸುತ್ತಮುತ್ತಲಿನ ಪ್ರದೇಶವು ಜಲಾವೃತಗೊಂಡಿದೆ ಕೀರು ಹೊಳೆಯ ಸಮೀಪವಿರುವ ಕಾರ್ಮಿಕರ ನಿವಾಸವು ಅಪಾಯದ ಅಂಚಿನಲ್ಲಿದ್ದು ಕಾರ್ಮಿಕರನ್ನು ರಕ್ಷಣೆ ಮಾಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳವು ಸ್ಥಳ ಆಗಮಿಸಿ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಕೆದಮುಳ್ಳೂರು ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ.
ಇಂದು ಬೆಳಿಗ್ಗೆ ನಗರದ ಮೂರ್ನಾಡು ರಸ್ತೆಯ ಹಂದಿ ಮಾಂಸ ಮಾರುಕಟ್ಟೆಯ ಬಳಿ ಬೃಹತ್ ಮರವು ಧಾರೆಗೆ ಉರುಳಿದ ಪರಿಣಾಮ ಕೆಲವು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿದ್ದು, ನಂತರದಲ್ಲಿ ಅರಣ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿಯ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿ ಸಂಚಾರ ಮುಕ್ತ ಮಾಡಿದರು.
ನಗರದಿಂದ ಆರ್ಜಿ ಗ್ರಾಮಕ್ಕೆ ತೆರಳುವ ಮಲಬಾರ್ ರಸ್ತೆಯಲ್ಲಿ ರಾಜ ಕಾಲುವೆಯಿಂದ ಹರಿಯುವ ನೀರು ರಸ್ತೆಯ ಮೇಲ್ಭಾಗದಲ್ಲಿ ಹರಿಯುತ್ತಿದೆ ಹೊಸದಾಗಿ ನಿರ್ಮಾಣಗೊಂಡ ಸೇತುವೆಯ ಸಮೀಪವಿರುವ ಗದ್ದೆಗಳು ಜಲಾವೃತಗೊಂಡಿದೆ ಪೆರುಂಬಾಡಿ, ಆರ್ಜಿ ಮತ್ತು ಬೇಟೋಳಿ ಇತರೆಡೆಗಳಿಗೆ ತೆರಳುವ ಸಾರ್ವಜನಿಕರು ಸಂಕಷ್ಟಕ್ಕಿಡಾಗಿದ್ದಾರೆ. ಲಘು ವಾಹನದ ಚಾಲಕರು ಹರಿಯುವ ನೀರಿನಲ್ಲಿ ವಾಹನವನ್ನು ಚಲಾಯಿಸಿಕೊಂಡು ಸಾಗುತ್ತಿದ್ದಾರೆ.
ಮಳೆಯ ಭೀಕರತೆಗೆ ನಾಗರಿಕರು ಬೆಚ್ಚಿಬಿದ್ದಿದ್ದಾರೆ. ಇಲಾಖೆಗಳು ಮತ್ತು ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳವು ಮಳೆಯಿಂದಾಗುವ ಅನಾಹುತಗಳನ್ನು ತಡೆಗಟ್ಟಲು ಶ್ರಮಿಸುತ್ತಿದ್ದಾರೆ.
ಡಿ.ಎಂ. ರಾಜ್‍ಕುಮಾರ್, ಕೆ.ಕೆ.ಎಸ್. ವೀರಾಜಪೇಟೆ