ಮಡಿಕೇರಿ, ಆ. 8: ಪ್ರವಾಹಕ್ಕೆ ಸಿಲುಕಿದ ಮನೆಯೊಳಗಿನಿಂದ ಹೊರ ಬರಲಾಗದೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಅಮ್ಮ-ಮಗನ ಪ್ರಾಣವನ್ನು ನಿಯತ್ತಿಗೆ ಮತ್ತೊಂದು ಹೆಸರಾಗಿರುವ ಶ್ವಾನವೊಂದು ಉಳಿಸಿರುವ ಪ್ರಸಂಗ ನಡೆದಿದೆ.

ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಎಲ್ಲೆಡೆ ಪ್ರವಾಹದ ಪರಿಸ್ಥಿತಿ ತಲೆದೋರಿದೆ. ಇತ್ತ ಮೂರ್ನಾಡು ಬಳಿಯ ಹೊದ್ದೂರು ಗ್ರಾ.ಪಂ. ವ್ಯಾಪ್ತಿಯ ಹೊದ್ದೂರು ಗ್ರಾಮ ಕೂಡ ಮುಳುಗಡೆಗೊಂಡಿದೆ. ನಿನ್ನೆ ಈ ವ್ಯಾಪ್ತಿಯಲ್ಲಿ ಎನ್‍ಡಿಆರ್‍ಎಫ್ ತಂಡದವರು ಕೆಲವರನ್ನು ರಕ್ಷಿಸಿದ್ದರು. ಆದರೆ ರಾತ್ರಿ ಪ್ರವಾಹದ ನೀರು ಏರಿಕೆಯಾಗಿ 15ಕ್ಕೂ ಅಧಿಕ ಮನೆಗಳು ಮುಳುಗಡೆಗೊಂಡಿವೆ. 25ಕ್ಕೂ ಹೆಚ್ಚು ಮಂದಿ ಮನೆಯೊಳಗೆ ಸಿಲುಕಿ ಹೊರ ಬರಲಾರದೆ ಪರದಾಡಿದ್ದಾರೆ. ಯಾವದೇ ದಾರಿ ಕಾಣದಾದಾಗ ಯಾರೋ ದುಬಾರೆಯ ರ್ಯಾಫ್ಟಿಂಗ್ ಅಸೋಸಿಯೇಶನ್ ಅಧ್ಯಕ್ಷ ಸಿ.ಎಲ್. ವಿಶ್ವ ಅವರಿಗೆ ಫೋನಾಯಿಸಿ ಬೆಳಿಗ್ಗೆ 9 ಗಂಟೆಗೆ ವಿಷಯ ತಿಳಿಸಿದ್ದಾರೆ. ಕೂಡಲೇ ವಿಶ್ವ ಅವರ ತಂಡ ಜೀಪಿನಲ್ಲಿ ರ್ಯಾಫ್ಟಿಂಗ್ ದೋಣಿಯೊಂದಿಗೆ ಹೊದವಾಡಕ್ಕೆ ಬಂದಿದ್ದಾರೆ. ದೋಣಿ ಮೂಲಕ ಮನೆಯೊಳಗಿದ್ದವರನ್ನು ರಕ್ಷಿಸಿದ್ದಾರೆ.

ಇನ್ನೇನು ಹೊರಡಬೇಕೆನ್ನುವ ಷ್ಟರಲ್ಲಿ ಅನತಿ ದೂರದಲ್ಲಿದ್ದ ಮನೆ ಯೊಂದರ ಬಳಿಯಿಂದ ನಾಯಿಯೊಂದು ಇವರತ್ತ ನೋಡಿ ಬೊಗಳುತ್ತಿದ್ದುದು ಈ ತಂಡಕ್ಕೆ ಗೋಚರಿಸಿದೆ. ತಂಡದವರು ಅಲ್ಲಿಗೆ ಹೋಗಿ ನೋಡಿದಾಗ ಮನೆಯೊಳಗಡೆ ತಾಯಿ-ಮಗ ಇಬ್ಬರು ಮನೆಯ ಸೂರಿನ ಕೌಕೋಲನ್ನು ಹಿಡಿದು ಕೊಂಡು ನೇತಾಡುತ್ತಾ ರಕ್ಷಣೆಗಾಗಿ ಅಂಗಲಾಚುತ್ತಿದ್ದುದು ಗೋಚರಿಸಿದೆ.

ವಯಸ್ಸಾದ ಸಾವಿತ್ರಿ ಹಾಗೂ ಪುತ್ರ ಮುರುಗೇಶ ಅವರುಗಳು ರಾತ್ರಿಯಿಡೀ ಅದೇ ರೀತಿ ಕಳೆದಿದ್ದು, ಅವರುಗಳನ್ನು ಈ ತಂಡ ಸುರಕ್ಷಿತವಾಗಿ ಅಲ್ಲಿಂದ ಸ್ಥಳಾಂತರಿಸಿ ದ್ದಾರೆ. ಅಲ್ಲಿನ ಶಾಲೆಯಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರಕ್ಕೆ ಸಾಗಿಸಲಾಗಿದೆ. ಒಂದು ವೇಳೆ ಶ್ವಾನ ಬೊಗಳದಿದ್ದಿದ್ದರೆ ಈ ಅಮ್ಮ-ಮಗನ ಪ್ರಾಣ ಉಳಿಯುತ್ತಿರಲಿಲ್ಲವೇನೋ? ಪ್ರಾಣ ಉಳಿಸಿದ ಶ್ವಾನವನ್ನು ಹಿಡಿದು ರಕ್ಷಿಸಲು ಹೋದಾಗ ಅದು ಅಲ್ಲಿಂದ ಓಡಿ ಕಾಲ್ಕಿತ್ತಿತು...!

ಚಿತ್ರ, ಮಾಹಿತಿ: ಲಕ್ಷ್ಮೀಶ್