*ಗೋಣಿಕೊಪ್ಪಲು, ಆ. 8: ಬುಧವಾರ ರಾತ್ರಿಯಿಂದಲೇ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಗೆ ಗೋಣಿಕೊಪ್ಪಲು ಪಟ್ಟಣ ದ್ವೀಪವಾಗಿದೆ.ಪಟ್ಟಣದ ತಿತಿಮತಿ ವೀರಾಜಪೇಟೆ ಮುಖ್ಯ ರಸ್ತೆಯನ್ನು ಬಿಟ್ಟರೆ ಉಳಿದಂತೆ ಎಲ್ಲ ಮಾರ್ಗಗಳು ಬಂದ್ ಆಗಿವೆ. ಗೋಣಿಕೊಪ್ಪಲು, ಪೊನ್ನಂಪೇಟೆ ನಡುವಿನ ಬೈಪಾಸ್ ರಸ್ತೆ ತೋಡು ಉಕ್ಕಿ ಹರಿದು ಸೆಸ್ಕಾಂ ಮತ್ತು ಎಚ್ಪಿ ಪೆಟ್ರೋಲ್ ಬಂಕ್ ನಡುವಿನ ರಸ್ತೆ ನೀರಿನಲ್ಲಿ ಮುಳುಗಿದೆ. ತೋಡಿನ ಸೇತುವೆ ಮೇಲೆ 3 ಅಡಿಯಷ್ಟು ನೀರು ಹರಿಯುತ್ತಿದ್ದು ವಾಹನ ಸಂಚಾರ ಕಡಿತಗೊಂಡಿದೆ. ಇತ್ತ ಬೈಪಾಸ್ ರಸ್ತೆ ಮೇಲೂ ತೋಡು ಮಗುಚಿ ಈ ಭಾಗದ ಸಂಚಾರವೂ ಕಡಿತಗೊಂಡಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಅರುವತ್ತೊಕ್ಕಲು ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ರಸ್ತೆ ಮಾರ್ಗವಾಗಿ ಸಂಚರಿಸಿದವು.
ಪಾಲಿಬೆಟ್ಟ ರಸ್ತೆಯ ದುರ್ಗಾಬೋಜಿ ಹೊಟೇಲ್ ಬಳಿ ಕೀರೆಹೊಳೆ ಪ್ರವಾಹ ಉಕ್ಕಿ ಈ ಭಾಗದ ರಸ್ತೆ ಸಂಚಾರಕ್ಕೂ ವ್ಯತ್ಯಯ ಉಂಟಾಗಿದೆ. ಸೇಂಟ್ ಥಾಮಸ್ ಶಾಲೆ ಕೆಳಗಿನ 7 ನೇ ಬಡಾವಣೆ ಹಾಗೂ ಮುತ್ತಣ್ಣ ಬಡಾವಣೆಯ ಹತ್ತಾರು ಮನೆಗಳು ನೀರಿನಲ್ಲಿ ಮುಳುಗಿವೆ. ಪಟ್ಟಣದ ಮೀನು ಮಾರುಕಟ್ಟೆ ಕೆಳಗಿನ 2ನೇ ಬ್ಲಾಕಿನ ಗುಡಿಸಲು ಗಳಿಗೂ ಪ್ರವಾಹ ಆವರಿಸಿದೆ. ಕೂಲಿಕಾರ್ಮಿಕ ಬಡ ವರ್ಗದವರೇ ಹೆಚ್ಚಾಗಿ ವಾಸಿಸುತ್ತಿರುವ ಇಲ್ಲಿನ ಗುಡಿಸಲುಗಳಿಗೆ ಆವರಿಸಿಕೊಂಡಿರುವ ನೀರಿನಿಂದ ಇವರೆಲ್ಲ ಅತಂತ್ರರಾಗಿದ್ದಾರೆ.
ಮುಕುಂದ ಬಡಾವಣೆಯ ಪಕ್ಕದಲ್ಲಿರುವ ನೇತಾಜಿ ಬಡಾವಣೆಯ ಮನೆಗಳೂ ಕೀರೆಹೊಳೆ ಪ್ರವಾಹ ಆವರಿಸಿಕೊಂಡಿದೆ.ಗದ್ದೆಯಾಗಿದ್ದ ಈ ಬಡಾವಣೆಯನ್ನು ಇತ್ತೀಚಿಗಷ್ಟೇ ರಸ್ತೆ ಮಾಡಿಸಿ ಡಾಂಬಾರು ಹಾಕಿ ಅಭಿವೃದ್ಧಿ ಪಡಿಸಲಾಗಿತ್ತು. ಕೀರೆಹೊಳೆ ಪ್ರವಾಹದ ನೀರಿನೊಂದಿಗೆ ತ್ಯಾಜ್ಯ ರಾಶಿರಾಶಿಯಾಗಿ ಹರಿದು ಬರುತ್ತಿದ್ದು ಸೇತುವೆ ಹಾಗೂ ಗಿಡಮರಗಳು ಇರುವ ಕಡೆ ನಿಂತು ನೀರಿನ ಹರಿವಿಗೆ ತಡೆ ಒಡ್ಡಿದೆ. ಹಣವಿದ್ದವರು ಮಾಡಿದ ಪಾಪದ ಕೆಲಸಕ್ಕೆ ಸಾಮಾನ್ಯ ಜನ ನೋವು ಅನುಭವಿಸಬೇಕಾಗಿದೆ ಎನ್ನುತ್ತಾರೆ 2ನೇ ಬ್ಲಾಕಿನ ತಾಯಮ್ಮ, ಮಹಮದ್ ಅನ್ವರ್. ಕೀರೆಹೊಳೆ ನೀರಿಗೆ ಸಿಕ್ಕಿದ ಹಾವು, ಇಲಿ ಮೊದಲಾದವು ಮನೆಗಳಿಗೆ ನುಗ್ಗಿ ಮತ್ತಷ್ಟು ಆತಂಕ ಹೆಚ್ಚಿಸಿವೆ.
ಇದರ ಜತೆಗೆ ಸೂಕ್ತ ಚರಂಡಿ ವ್ಯವಸ್ಥೆಗಳಿಲ್ಲದ್ದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದು. ಪಟ್ಟಣದ ಎಂ.ಎಂ.ಬಡಾವಣೆ, ಅಚ್ಚಪ್ಪ ಬಡಾವಣೆ, ಕಾವೇರಿ ಹಿಲ್ಸ್, ಪಟೇಲ್ ನಗರ 3ನೇ ವಿಭಾಗದ ಬಡಾವಣೆ, ಇವುಗಳೂ ನೀರಿನಿಂದ ಆವೃತಗೊಂಡಿವೆ.
ಗೋಣಿಕೊಪ್ಪಲಿನ ಜನತೆ ಅನುಭವಿಸುತ್ತಿರುವ ಪ್ರವಾಹದ ಸಮಸ್ಯೆಗೆ ಕಾರಣ ಪಟ್ಟಣದ ಸುತ್ತ ಇರುವ ತೋಡುಗಳನ್ನು ಒತ್ತುವರಿ ಮಾಡಿಕೊಂಡಿರುವದೇ ಕಾರಣ. ಇದರ ಬಗ್ಗೆ ಜಿಲ್ಲಾಡಳಿತ ಕ್ರಮಕೈಗೊಂಡು ಒತ್ತುವರಿಯಾಗಿರುವ ಹೊಳೆ ಮತ್ತು ತೋಡಿನ ಜಾಗವನ್ನು ಮರು ಸರ್ವೆ ಮಾಡಿಸಿ ತೆರವುಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ಕಾಫಿ ಬೆಳೆಗಾರ ಹಾಗೂ ಎಫ್ಕೆಸಿಸಿಐ ರಾಜ್ಯ ಉಪಾಧ್ಯಕ್ಷ ಕೆ.ಬಿ.ಗಿರೀಶ್ ಗಣಪತಿ ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೆಲ್ವಿ, ಸದಸ್ಯರಾದ ಮಂಜುಳಾ, ಮಂಜುರೈ,ಮುರುಗ, ಕೆ.ಪಿ.ಬೋಪಣ್ಣ, ರತಿ ಅಚ್ಚಪ್ಪ, ರಾಜಶೇಖರ್, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ.ಬೋಪಣ್ಣ ಪ್ರವಾಹ ಪೀಡಿದ ಪ್ರದೇಶಗಳಿಗೆ ಭೇಟಿ ಜನತೆಗೆ ನೆರವಾದರು.
ಪೊನ್ನಂಪೇಟೆ, ಕುಂದ ಮಾರ್ಗದ ನಡುವಿನ ನಿನಾದ ಶಾಲೆ ಬಳಿಯ ತೋಡು ಉಕ್ಕಿ ಹರಿದು ಇಲ್ಲಿನ ಸೇತುವೆ ಕೂಡ ನೀರಿಲ್ಲಿ ಮುಳುಗಿದೆ. ಇದರಿಂದ ಈ ಭಾಗದ ರಸ್ತೆ ಸಂಚಾರ ಕೂಡ ಸ್ಥಗಿತಗೊಂಡಿದೆ. ಕುಂದ ಹಳ್ಳಿಗಟ್ಟು ಗ್ರಾಮದ ಬಸವೇಶ್ವರ ಬಡಾವಣೆಗೆ ತೆರಳುವ ತೋಡಿನ ಸೇತುವೆ ನೀರಿನಲ್ಲಿ ಮುಳುಗಿ ಸಂಚಾರ ಸಂಪರ್ಕಕ್ಕೆ ಅಡ್ಡಿಯಾಗಿದೆ. ಇಲ್ಲಿನ ಜನರು ಹೊರ ಬರುವದಕ್ಕೆ ಪ್ರಯಾಸ ಪಡುತ್ತಿದ್ದಾರೆ. ಅಧಿಕ ಗಾಳಿಗೆ ಗುಡಿಸಿಲಿನ ಪ್ಲಾಸ್ಟಿಕ್ ಹೊದಿಕೆಗಳು ಹಾರಿ ಹೋಗಿ ಮಳೆ ನೀರು ಒಳಗೆ ಬೀಳುತ್ತಿದೆ. ಇದರಿಂದ ಹೊರಗು ನೀರು ಒಳಗೂ ನೀರು ನುಗ್ಗಿ ವಾಸಿಸಲು ಹಿಂಸೆ ಯಾಗುತ್ತಿದೆ ಎಂಬ ನೋವು ಬಡಾವಣೆಯ ನಿವಾಸಿಗಳದ್ದು.
ಕೀರೆಹೊಳೆ ಉಕ್ಕಿ ಹರಿಯುತ್ತಿರುವದರಿಂದ ಕಿರುಗೂರು ನಲ್ಲೂರು ನಡುವಿನ ರಸ್ತೆ ಸಂಪರ್ಕ ಕಡಿದು ಹೋಗಿದೆ. ಇಲ್ಲಿ ಸುಮಾರು ಅರ್ಧ ಕಿಮೀ ದೂರದವರೆಗೆ ಗದ್ದೆಯನ್ನು ಆವರಿಸಿಕೊಂಡಿರುವ ಪ್ರವಾಹ ರಸ್ತೆಯನ್ನೂ ಮುಳುಗಿಸಿದೆ. ಹರಿಹರ, ಬಲ್ಯಮಂಡೂರು, ಕಾನೂರು, ನಿಟ್ಟೂರು, ಕೊಟ್ಟಗೇರಿ, ಬಾಳೆಲೆ, ಮಲ್ಲೂರು, ಜಾಗಲೆ ನಡುವೆ ಹರಿಯುವ ಲಕ್ಷ್ಮಣ ತೀರ್ಥ ನದಿ ಪ್ರವಾಹ ಸಾಗರವನ್ನೇ ಸೃಷ್ಟಿಸಿದೆ. ಪ್ರವಾಹಕ್ಕೆ ನದಿ ಬಯಲಿನ ಗದ್ದೆಗಳು ಜಲಾವೃತಗೊಂಡಿವೆ. ಲಕ್ಷ್ಮಣ ತೀರ್ಥ ನದಿ ಪ್ರವಾಹದಿಂದ ಕಾನೂರು ಬಳಿಯ ನಿಡುಗುಂಬ ಗ್ರಾಮ ದ್ವೀಪವಾಗಿದೆ. ಇಲ್ಲಿನ ಜನತೆ ಹೊರಬರಲಾರದೆ ತೀವ್ರ ಆತಂಕ ಪಡುತ್ತಿದ್ದಾರೆ,
ಲಕ್ಷ್ಮಣತೀರ್ಥ ನದಿ ಪ್ರವಾಹಕ್ಕೆ ಮಲ್ಲೂರು, ಬಾಳೆಲೆ ನಡುವಿನ ಸೇತುವೆ ನೀರಿನಲ್ಲಿ ಮುಳುಗಿದೆ. ಬಾಳೆಲೆ, ನಿಟ್ಟೂರು ನಡುವೆ ಕಳೆದ ವರ್ಷ ನೂತನವಾಗಿ ನಿರ್ಮಿಸಿದ್ದ ಸೇತುವೆ ಮೇಲೂ ಈ ಬಾರಿ ನೀರಿನಲ್ಲಿ ಮುಳುಗಿದೆ. ಕಾನೂರು ರಸ್ತೆ ಮೇಲೆ ಲಕ್ಷ್ಮಣಣತೀರ್ಥ ನದಿ ಪ್ರವಾಹ ಹೆಚ್ಚಿದ್ದು ಈ ಭಾಗದ ರಸ್ತೆ ಸಂಚಾರ ಕೂಡ ಸ್ಥಗಿತಗೊಂಡಿದೆ. ನದಿ ಪ್ರವಾಹದಿಂದ ವಡ್ಡರಮಾಡು ಕಾನೂರು, ತಟ್ಟೆಕೆರೆ, ನಿಟ್ಟೂರು ದ್ವೀಪದಂತಾಗಿವೆ. ಕಾರ್ಮಾಡು ನಾಗರಹೊಳೆ ಅರಣ್ಯದ ನಡುವಿನ ತೋಡಿನ ನೀರು ಉಕ್ಕಿ ಈ ಭಾಗದ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ವಿದ್ಯುತ್ ಅಭಾವದಿಂದ ಬಿಎಸ್ಎನ್ಎಲ್ ದೂರವಾಣಿ ಸ್ಥಬ್ದಗೊಂಡಿವೆ.
ಕತ್ತಲಿನಲ್ಲಿ ದಕ್ಷಿಣಕೊಡಗು: ಕಳೆದ ಮೂರು ದಿನಗಳಿಂದ ದಕ್ಷಿಣ ಕೊಡಗು ಕತ್ತಲಲ್ಲಿ ಮುಳುಗಿದೆ. ಹುಣಸೂರಿನಿಂದ ಪೊನ್ನಂಪೇಟೆ ಮಿಚ್ಗೊನೆಗೆ ಬರುವ 66 ಕೆವಿ ಮಾರ್ಗ ದುರಸ್ತಿಗೆ ಒಳಗಾಗಿದೆ. ಈ ಮಾರ್ಗವನ್ನು ಮೈಸೂರಿನಿಂದ ತಾಂತ್ರಿಕ ವರ್ಗದವರು ಬಂದು ದುರಸ್ತಿ ಪಡಿಸುತ್ತಿದ್ದಾರೆ ಎಂದು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಂಕಯ್ಯ ತಿಳಿಸಿದರು.
ಮೂರು ದಿನಗಳಿಂದ ತಿತಿಮತಿ, ದೇವರಪುರ, ಗೋಣಿಕೊಪ್ಪಲು, ಬಾಳೆಲೆ, ನಿಟ್ಟೂರು. ಮಾಯಮುಡಿ, ಕಾನೂರು, ಪೊನ್ನಂಪೇಟೆ ಹುದಿಕೇರಿ, ಶ್ರೀಮಂಗಲ ಮೊದಲಾದ ಗ್ರಾಮಗಳು ಕತ್ತಲಲ್ಲಿ ಮುಳುಗಿವೆ. ಇದರಿಂದ ಜನತೆಗೆ ಮೊಬೈಲ್ ಬಳಕೆ ಮತ್ತು ಇತರ ಸಂಪರ್ಕಕ್ಕೆ ಸಮಸ್ಯೆಯಾಗಿದೆ.
ರಸ್ತೆ ಸಂಚಾರ ಸ್ಥಗಿತ: ದಕ್ಷಿಣ ಕೊಡಗಿನಾದ್ಯಂತ ಮರಗಳು ಆಗಿಂದಾಗ್ಗೆ ಎಲ್ಲೆಂದರಲ್ಲಿ ಬೀಳುತ್ತಿರುವದರಿಂದ ಹಾಗೂ ನೀರಿನಲ್ಲಿ ರಸ್ತೆಗಳು ಮಳುಗಿರುವದರದಿಂದ ಶೇ.90 ರಷ್ಟು ಸಾರಿಗೆ ಮತ್ತು ಖಾಸಗಿ ಬಸ್ಗಳ ಓಡಾಟ ಕಡಿಮೆಯಾಗಿದೆ. ಗೋಣಿಕೊಪ್ಪಲು ಮತ್ತು ಪೊನ್ನಂಪೇಟೆ ಪಟ್ಟಣದಲ್ಲಿ ಜನರೇ ಇಲ್ಲದ್ದರಿಂದ ಬಹಳಷ್ಟು ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಶಾಲಾ ಕಾಲೇಜಿಗೆ ರಜೆ ನೀಡಿರುವದರಿಂದ ನಿತ್ಯ ಗಿಜಗುಡುತ್ತಿದ್ದ ಗೋಣಿಕೊಪ್ಪಲು ಬಸ್ ನಿಲ್ದಾಣ ಬಿಕೋ ಎನ್ನಿಸಿತು. ಗುಡುಗು ಸಹಿತ ಮಳೆ ಧಾರಾಕಾರವಾಗಿ ಸುರಿಯುತ್ತಿರುವದರಿಂದ ಮಳೆ ಮತ್ತಷ್ಟು ಹೆಚ್ಚಾಗುವ ಭೀತಿಯಲ್ಲಿ ಜನತೆಯನ್ನು ಚಿಂತೆ ಆವರಿಸಿದೆ. ಎಲ್ಲ ಕಡೆ ನೀರಿನ ಪ್ರವಾಹದಿಂದ ಅಲ್ಲಲ್ಲೆ ಪೊಲೀಸರು ಬ್ಯಾರಿಕೇಡ್ ಹಾಕಿ ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸಿದರು.
-ಚಿತ್ರ ವರದಿ: ಎನ್.ಎನ್.ದಿನೇಶ್