ಕೂಡಿಗೆ, ಆ. 8 : ಕಾವೇರಿ-ಹಾರಂಗಿ ನದಿ ನೀರಿನಲ್ಲಿ ಏರಿಕೆಯಾಗುತ್ತಿರುವ ಪರಿಣಾಮ ಹೆಬ್ಬಾಲೆಯ ಕೊಲ್ಲಿಯು ತುಂಬಿ ಅಕ್ಕ ಪಕ್ಕದ ಜಮೀನುಗಳು, ಸಮೀಪದಲ್ಲಿದ್ದ ಮನೆಯೊಂದು ಜಲಾವೃತವಾಗಿದೆ.

ಕಳೆದ ಭಾರಿ ಕೊಲ್ಲಿ ಸಂಪೂರ್ಣ ತುಂಬಿ ರಾಜ್ಯ ಹೆದ್ದಾರಿಯು ಸಂಪೂರ್ಣವಾಗಿ ಮುಳುಗಡೆಯಾಗಿ ರಸ್ತೆ ಸಂಚಾರ ಕಡಿತಗೊಂಡಿತ್ತು. ಇದೀಗ ಅದೇ ರೀತಿಯಲ್ಲಿ ಕೊಲ್ಲಿಯಲ್ಲಿ ನೀರು ಹೆಚ್ಚಾಗಿದ್ದು, ಜಮೀನುಗಳು ಹಾಗೂ ರತ್ನಮ್ಮ ಎಂಬುವವರಿಗೆ ಸೇರಿದ ಮನೆ ಜಲಾವೃತಗೊಂಡಿದ್ದು, ಇನ್ನೆರಡು ದಿನಗಳೂ ಇದೇ ರೀತಿಯ ಮಳೆ ಸುರಿದಲ್ಲಿ ಈ ಬಾರಿಯು ರಾಜ್ಯ ಹೆದ್ದಾರಿ ಮುಳುಗಡೆಯಾಗುವ ಸಾಧ್ಯತೆಯಿದೆ.

ಸ್ಥಳಕ್ಕೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಾಕೇಶ್, ಹಾಗೂ ಸಿಬ್ಬಂದಿ ಭೇಟಿ ನೀಡಿ ಅಲ್ಲಿನ ನಿವಾಸಿಗಳನ್ನು ಹಾಗೂ ಸಾಮಗ್ರಿಗಳನ್ನು ಸ್ಥಳಾಂತರಿಸಲು ಮುಂದಾಗಿದ್ದಾರೆ.

ಹಾರಂಗಿ-ಕಾವೇರಿ ನದಿ ನೀರು ಹೆಚ್ಚಳವಾಗಿರುವದರಿಂದ ಕಣಿವೆಯ ಶ್ರೀ ರಾಮಲಿಂಗೇಶ್ವರಸ್ವಾಮಿ ದೇವಾಲಯದ ಮುಂಭಾಗ ಹರಿಯುವ ಕಾವೇರಿ ನದಿ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ.

ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಯು ಮುಳುಗಡೆಯಾಗುವ ಸಾಧ್ಯತೆಯಿದ್ದು, ನಾಲ್ಕು ಅಡಿಯಷ್ಟೇ ನೀರು ಹರಿದರೂ ತೂಗುಸೇತುವೆ ಕಳೆದ ಭಾರಿಯಂತೆ ಸಂಪೂರ್ಣ ಮುಳುಗಡೆಯಾಗಿದೆ.

ಕೂಡುಮಂಗಳೂರು ಗ್ರಾಮ ಪಂಚಾಯ್ತಿಯ ವತಿಯಿಂದ ಕಳೆದ ಭಾರಿ ಕಾವೇರಿ-ಹಾರಂಗಿ ನದಿ ದಟದಲ್ಲಿರುವ ಪ್ರದೇಶಗಳಾದ ಕೂಡುಮಂಗಳೂರು ಮತ್ತು ಕೂಡ್ಲೂರು ಗ್ರಾಮಗಳ ನಿವಾಸಿಗಳಿಗೆ ಸೂಚನೆ ನೀಡಿದ್ದು, ಸ್ಥಳಾಂತರಗೊಳಿಸಲು ಮುಂದಾಗಿದೆ.

ಕೂಡಿಗೆ ವ್ಯಾಪ್ತಿಯ ಕಣಿವೆ ಸಮೀಪದಲ್ಲಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತಿರುವ 15 ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ ಗದ್ದೆಗಳು ನೀರಿನಿಂದ ಮುಳುಗಡೆಯಾಗಿವೆ.

- ಕೆ.ಕೆ. ನಾಗರಾಜ್ ಶೆಟ್ಟಿ