ಕುಶಾಲನಗರ, ಆ. 8: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನದಿ ತಟದ ತಗ್ಗು ಪ್ರದೇಶಗಳು ಬಹುತೇಕ ನೀರಿನಿಂದ ಆವೃತಗೊಂಡು ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನೆÀ್ನಲೆಯಲ್ಲಿ ಕಾವೇರಿ ನದಿ ತುಂಬಿ ಹರಿದು ಕುಶಾಲನಗರದ ಸಾಯಿ ಬಡಾವಣೆ, ಕುವೆಂಪು ಬಡಾವಣೆ, ಇಂದಿರಾ ಬಡಾವಣೆ ಸೇರಿದಂತೆ ಹಲವು ಬಡಾವಣೆಗಳು ಮತ್ತು ನೆರೆಯ ಕೊಪ್ಪ ವ್ಯಾಪ್ತಿಯಲ್ಲಿ ಹಿನ್ನೀರಿನಿಂದ ನೂರಾರು ಮನೆಗಳು ನೀರಿನಿಂದ ಆವೃತಗೊಂಡ ದೃಶ್ಯ ಗೋಚರಿಸಿದೆ. ಕುಶಾಲನಗರ ಸಾಯಿ ಬಡಾವಣೆಯಲ್ಲಿ ಇರುವ ಸಾಯಿ ಮಂದಿರದಲ್ಲಿ ಗುರುವಾರ ನಡೆಯಬೇಕಾದ ಪೂಜೆ ಕಾರ್ಯಕ್ರಮಗಳು ರದ್ದುಗೊಂಡು ಭಕ್ತಾದಿಗಳು ಹಿಂತಿರುಗಬೇಕಾಯಿತು.

ನೆರೆ ಪೀಡಿತ ಬಡಾವಣೆಗಳಲ್ಲಿ ಜಿಲ್ಲಾಡಳಿತ ತೆರವು ಕಾರ್ಯಾಚರಣೆ ಕೈಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಬಡಾವಣೆಗಳ ನಾಗರೀಕರು ಸ್ವಯಂ ಪ್ರೇರಿತರಾಗಿ ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಮನೆ ತೆರವುಗೊಳಿಸಿ ಬದಲೀ ವ್ಯವಸ್ಥೆ ಕಲ್ಪಿಸಿಕೊಂಡ ದೃಶ್ಯ ಕಂಡುಬಂತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಸ್ಥಳೀಯ ಕೆಲವು ಸಂಘಟನೆಗಳ ಯುವಕರ ತಂಡ ರಕ್ಷಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜಲಾವೃತಗೊಂಡ ಮನೆಗಳನ್ನು ಖಾಲಿ ಮಾಡಿದ ಸಂತ್ರಸ್ತರು ತಮ್ಮ ತಮ್ಮ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ದುಬಾರೆ ರಿವರ್ ರ್ಯಾಫ್ಟಿಂಗ್‍ನ 4 ರ್ಯಾಫ್ಟರ್ ಬೋಟ್‍ಗಳನ್ನು ಬಳಸಿಕೊಂಡು ಜಲಾವೃತಗೊಂಡ ಮನೆಗಳಿಂದ ನಿವಾಸಿಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.

ಈ ನಡುವೆ ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಿದ ಪರಿಣಾಮ ಕಾವೇರಿ ನದಿ ಹಿನ್ನೀರು ಕುಶಾಲನಗರದತ್ತ ಮುನ್ನುಗ್ಗಲು ಕಾರಣವಾಗಿದೆ. ಜಲಾವೃತಗೊಂಡ ಬಡಾವಣೆಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುತ್ತಿದ್ದ ಕಾರಣ ನಿವಾಸಿಗಳ ಮನದಲ್ಲಿ ಆತಂಕ ಮನೆಮಾಡಿದ್ದು ಕಂಡುಬಂತು. ಎಡೆಬಿಡದೆ ಮಳೆ ಸುರಿದಲ್ಲಿ ಇತ್ತ ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗಲಿದ್ದು ಹಾರಂಗಿ ಜಲಾಶಯದಿಂದ ಕೂಡ ನದಿಗೆ ನೀರು ಹರಿಸಿದಲ್ಲಿ ಬಡಾವಣೆಗಳು ಮತ್ತಷ್ಟು ಪ್ರಮಾಣದಲ್ಲಿ ಮುಳುಗಡೆಯಾಗುವ ಸಾಧ್ಯತೆಯಿದ್ದು ಈ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಸ್ಥಳೀಯ ಆಡಳಿತ ಮತ್ತು ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ಪ್ರಕಟಣೆ ಹೊರಡಿಸು ವದರೊಂದಿಗೆ ಧ್ವನಿವರ್ಧಕಗಳಲ್ಲಿ ಎಚ್ಚರಿಕೆ ನೀಡುತ್ತಿದ್ದ ದೃಶ್ಯ ಗೋಚರಿಸಿತು.

ಅತಿವೃಷ್ಠಿಯಿಂದ ನೆರೆಪೀಡಿತಗೊಂಡ ಕುಶಾಲನಗರ ಪಟ್ಟಣ ಮತ್ತು ಮುಳ್ಳುಸೋಗೆ ವ್ಯಾಪ್ತಿಯ ಬಡಾವಣೆಗಳಿಗೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಶಾಸಕರು ಸಾಂತ್ವನ ಕೇಂದ್ರ ಆರಂಭಿಸಿ ಸಂತ್ರಸ್ತರನ್ನು ಸ್ಥಳಾಂತರಿಸುವಂತೆ ಸೂಚನೆ ನೀಡಿದರು. ಬಡಾವಣೆ ನಾಗರಿಕರಿಗೆ ಯಾವದೇ ಆತಂಕ ಪಡದೆ ಎಚ್ಚರವಹಿಸುವಂತೆ ಸಲಹೆ ನೀಡಿದರು.

ಪಟ್ಟಣದ ಸಾಯಿ ಬಡಾವಣೆಯಲ್ಲಿ ರ್ಯಾಫ್ಟರ್ ಬೋಟ್ ಮೂಲಕ ಪರಿಶೀಲನೆ ನಡೆಸಿದ ಶಾಸಕರು ನೆರೆಪೀಡಿತ ಪ್ರದೇಶದ ಅವಲೋಕನ ನಡೆಸಿದರು. ಸಾಂತ್ವನ ಕೇಂದ್ರಗಳಿಗೆ ಸಂತ್ರಸ್ತರ ಸ್ಥಳಾಂತರಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿದ್ದ ಕುಶಾಲನಗರ ಪಪಂ ಮುಖ್ಯಾಧಿಕಾರಿ ಸುಜಯ್‍ಕುಮಾರ್ ಮತ್ತು ಮುಳ್ಳುಸೋಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಅವರಿಗೆ ಸೂಚನೆ ನೀಡಿದರು. ಈ ಸಂದರ್ಭ ಉಪವಿಭಾಗಾಧಿಕಾರಿ ಜವರೇಗೌಡ ಸೇರಿದಂತೆ ಜನಪ್ರತಿನಿಧಿಗಳು ಇದ್ದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಕುಶಾಲನಗರದ ನೆರೆಪೀಡಿತ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ ಪಣ್ಣೇಕರ್ ಮತ್ತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕುಶಾಲನಗರ ಮತ್ತು ಹಾರಂಗಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾರಂಗಿ ಜಲಾಶಯದಿಂದ ನದಿಗೆ ನೀರು ಹರಿಸುತ್ತಿರುವ ಪ್ರಮಾಣದ ಬಗ್ಗೆ ಮಾಹಿತಿ ಪಡೆದುಕೊಂಡ ಅಧಿಕಾರಿಗಳು, ಕುಶಾಲನಗರದ ಸಾಯಿ ಕುವೆಂಪು ಬಡಾವಣೆ, ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳ ತಂಡದೊಂದಿಗೆ ರಕ್ಷಣಾ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ರ್ಯಾಫ್ಟಿಂಗ್ ಬೋಟ್ ಮೂಲಕ ತೆರಳಿ ನೆರೆ ಪೀಡಿತ ಸಾಯಿ ಬಡಾವಣೆಯಲ್ಲಿ ಪರಿಶೀಲನೆ ನಡೆಸಿದರು. ಸಾಂತ್ವನ ಕೇಂದ್ರ ಆರಂಭಿಸಲು ಗುಮ್ಮನಕೊಲ್ಲಿಯ ವಾಲ್ಮೀಕಿ ಭವನಕ್ಕೆ ತೆರಳಿದ ಅಧಿಕಾರಿಗಳು ಸ್ಥಿತಿಗತಿಗಳ ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ವಿಕೋಪ ಎದುರಿಸಲು ಜಿಲ್ಲಾಡಳಿತ ಕಳೆದ 3 ತಿಂಗಳಿನಿಂದ ಸಕಲ ಸಿದ್ದತೆ ಮಾಡಿಕೊಂಡಿದೆ. ಜಿಲ್ಲಡಳಿತದೊಂದಿಗೆ ಎನ್‍ಡಿಆರ್‍ಎಫ್, ಪೊಲೀಸ್, ಅಗ್ನಿಶಾಮಕ ದಳ ಸೇರಿದಂತೆ ಸ್ಥಳೀಯ ಆಡಳಿತ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು ಸಾರ್ವಜನಿಕರು ಯಾವದೇ ಆತಂಕ ಪಡುವ ಅಗತ್ಯವಿಲ್ಲ. ಕಳೆದ ವರ್ಷ ಕುಶಾಲನಗರ ಭಾಗದಲ್ಲಿ ನೆರೆ ಪರಿಸ್ಥಿತಿ ಉಂಟಾಗಲು ಕಾರಣವಾದ ಹಾರಂಗಿ ಜಲಾಶಯದಿಂದ ಈಗಾಗಲೆ ನೀರು ಹರಿಸಲು ಕ್ರಮಕೈಗೊಂಡಿರುವದು ಹೆಚ್ಚಿನ ಮಟ್ಟದಲ್ಲಿ ಅನಾಹುತಗಳು ಸಂಭವಿಸಲು ಸಾಧ್ಯವಿಲ್ಲ. ಅಗತ್ಯವಿರುವವರನ್ನು ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರಿಸಲು ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದರು.

ಕೊಪ್ಪ ಕಾವೇರಿ ಸೇತುವೆಯಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದು ಬೆಳಗಿನಿಂದಲೇ ಜನಸ್ತೋಮ ವೀಕ್ಷಿಸುತ್ತಿದ್ದ ದೃಶ್ಯ ಕಂಡುಬಂತು. ಹೆದ್ದಾರಿ ರಸ್ತೆಯಲ್ಲಿ ಆಗಾಗ್ಯೆ ವಾಹನ ಸಂಚಾರಕ್ಕೆ ಕೂಡ ಇದರಿಂದ ಅಡ್ಡಿಯಾಗುತ್ತಿತ್ತು.

ಕಳೆದ ರಾತ್ರಿ ಬಿರುಸಿನ ಗಾಳಿಯಿಂದ ಹಲವೆಡೆ ಮರ ಗಿಡಗಳು ಅಲ್ಲಲ್ಲಿ ಬಿದ್ದ ಹಿನ್ನಲೆಯಲ್ಲಿ ಬಹುತೇಕ ಜನಜೀವನ ಅಸ್ತವ್ಯಸ್ತಗೊಂಡ ದೃಶ್ಯ ಗೋಚರಿಸಿತು.

ಕುಶಾಲನಗರ ಹೆದ್ದಾರಿ ರಸ್ತೆಯ ಪೆಟ್ರೋಲ್ ಬಂಕ್ ಬಳಿಯ ಕಾರ್ಮೆಲ್ ಟಯರ್ಸ್ ಮಾಲೀಕರ ಮನೆಯ ಆವರಣದಲ್ಲಿ ಮರದ ಕೊಂಬೆಯೊಂದು ಬಿದ್ದು ಮನೆ ಜಖಂಗೊಂಡಿದೆ. -ಚಂದ್ರಮೋಹನ್ / ನಾಗರಾಜಶೆಟ್ಟಿ.