ಮಡಿಕೇರಿ, ಆ. 8: ಪ್ರಕೃತಿ ವಿಕೋಪದ ನಿರಾಶ್ರಿತರಿಗೆ ಮತ್ತು ಬಡ ವರ್ಗದ ಜನರಿಗೆ ನಿವೇಶನವನ್ನು ಒದಗಿಸಬೇಕೆಂದು ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು.

ನಗರದ ಗಾಂಧಿ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ಸಾಗಿದ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಈ ಸಂದರ್ಭ ಮಾತನಾಡಿದ ಸಮಿತಿಯ ಅಧ್ಯಕ್ಷ ನಿರ್ವಾಣಪ್ಪ, ಕೊಡಗಿನ ಮೂರು ತಾಲೂಕುಗಳಲ್ಲಿ ಸಾವಿರಾರು ಕೂಲಿ ಕಾರ್ಮಿಕರು ಶ್ರೀಮಂತರ ಲೈನ್ ಮನೆ ಹಾಗೂ ಬಾಡಿಗೆ ಮನೆಗಳಲ್ಲಿ ಜೀವನ ಸಾಗಿಸುತ್ತಿದ್ದು, ಇವರುಗಳಿಗೂ ಭೂಮಿ ಮತ್ತು ವಸತಿ ಹಂಚಿಕೆ ಸೇರಿದಂತೆ ಇನ್ನಿತರ ಮೂಲ ಭೂತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಇಲ್ಲಿಯವರೆಗೂ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಿತಿಯ ಕಾರ್ಯದರ್ಶಿ ಅಮಿನ್ ಮೊಹಿಸಿನ್ ಮಾತನಾಡಿ, ನಿವೇಶನ ಕೋರಿ ಈಗಾಗಲೇ ಸಾಕಷ್ಟು ಬಾರಿ ಪ್ರತಿಭಟನೆಯನ್ನು ಹಮ್ಮಿಕೊಂಡರೂ ಬಡವರ ಬೇಡಿಕೆಗಳನ್ನು ಈಡೇರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಕೊಡಗಿನ ಜನಪ್ರತಿನಿಧಿಗಳು ರಾಜ್ಯದಲ್ಲಿ ತಮ್ಮದೇ ಸರ್ಕಾರ ಅಧಿಕಾರ ಬಂದ ಕೂಡಲೇ ಕೊಡಗಿನ ನಿರಾಶ್ರಿತರ ಬಗ್ಗೆ ಚಿಂತಿಸದೇ ಟಿಪ್ಪು ಜಯಂತಿಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದು, ಕೊಡಗಿನ ನಿರಾಶ್ರಿತರ ಪರ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸದಸ್ಯರಾದ ಕೆ. ಮೊಣ್ಣಪ್ಪ, ಸಣ್ಣಪ್ಪ, ಮಂಜು, ರಾಜು, ಅಪ್ಪು, ಅನಿತ, ತಾಯಮ್ಮ ಪಾಲ್ಗೊಂಡಿದ್ದರು.