ಕುಶಾಲನಗರ, ಆ. 8: ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆ ದುಬಾರೆ ಪ್ರವಾಸಿ ಕೇಂದ್ರದಲ್ಲಿ ಸಾಹಸಿ ರ್ಯಾಫ್ಟಿಂಗ್ ಕ್ರೀಡೆಯನ್ನು ಸ್ಥಗಿತಗೊಳಿಸಲಾಗಿದೆ. ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ಭದ್ರತೆ ಹಿನ್ನೆಲೆ ತಾತ್ಕಾಲಿಕವಾಗಿ ರ್ಯಾಫ್ಟಿಂಗ್ ರದ್ದುಗೊಳಿಸಲಾಗಿದೆ ಎಂದು ದುಬಾರೆ ರ್ಯಾಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಸಿ.ಎಲ್. ವಿಶ್ವ ಮಾಹಿತಿ ನೀಡಿದ್ದಾರೆ.
ದುಬಾರೆ ಸಾಕಾನೆ ಶಿಬಿರಕ್ಕೆ ತೆರಳುವ ಮೋಟಾರ್ ಬೋಟ್‍ಗಳ ಸಂಚಾರ ರದ್ದುಗೊಳಿಸಲಾಗಿದ್ದು ಶಿಬಿರದಿಂದ ನಂಜರಾಯಪಟ್ಟಣ ಕಡೆ ತೆರಳುವ ಗಿರಿಜನರು ಮತ್ತು ಅರಣ್ಯ ಸಿಬ್ಬಂದಿಗಳಿಗೆ ಅನಾನುಕೂಲ ಉಂಟಾಗಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ಗರಿಷ್ಠ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದ್ದು ನದಿ ತಟದ ಹೊಲ, ಗದ್ದೆಗಳು ನೀರಿನಿಂದ ಆವೃತಗೊಂಡಿವೆ.