ಸಿದ್ದಾಪುರ, ಆ. 8: ಯುವಜನತೆ ಭವಿಷ್ಯದ ದೃಷ್ಟಿಯಿಂದ ಮತ್ತು ಸದೃಢ ಭಾರತದ ನಿರ್ಮಾಣಕ್ಕಾಗಿ ಕುವೆಂಪುರವರ ಆಶಯದಂತೆ ವಿಶ್ವ ಮಾನವರಾಗಬೇಕೆಂದು ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಕನ್ನಡ ಉಪನ್ಯಾಸಕ ಜಮೀರ್ ಅಹಮ್ಮದ್ ಕರೆ ನೀಡಿದರು.
ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿ ಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವ ಜನರು ಈಗಿನ ಅವಸರದ ಯುಗದಲ್ಲಿ ತಾಳ್ಮೆ, ಸಹನೆ, ಬದ್ಧತೆ, ಗುರು ಹಿರಿಯರ ಮೇಲಿನ ಗೌರವ, ಸಮಾಜಕ್ಕಾಗಿ ಸಮರ್ಪಣಾ ಮನೋಭಾವ ಹೊಂದಿರುವದು ಅವಶ್ಯಕವಾಗಿದೆ. ಭಾರತದಲ್ಲಿ ಯುವಕರ ಸ್ಫೂರ್ತಿಯಾಗಿರುವ ಸ್ವಾಮಿ ವಿವೇಕಾನಂದರ ನುಡಿಮುತ್ತುಗಳ ಸಾರವನ್ನು ಅರಿತುಕೊಂಡು ಮುನ್ನಡೆ ದರೆ ಬದುಕು ಸಾರ್ಥಕಗೊಳ್ಳುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಪಿರಿಯಾಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಗೋವಿಂದೇಗೌಡ, ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಸಮಯ ಪ್ರಜ್ಞೆ ನಿರಂತರ ಕಲಿಕೆಗೆ ತಮ್ಮನ್ನು ತಾವು ತೊಡಗಿಸಿಕೊಂಡು ಯಶಸ್ಸು ಗಳಿಸಬೇಕು. ಪೋಷಕರಿಗೆ ಒಳ್ಳೆಯ ಮಕ್ಕಳಾಗಿ, ಗುರುಗಳಿಗೆ ಒಳ್ಳೆಯ ವಿದ್ಯಾರ್ಥಿಗಳಾಗಬೇಕು ಎಂದು ಕಿವಿಮಾತು ಹೇಳಿದರು. ಅಮ್ಮತ್ತಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸದಾನಂದ, ಮಾಲ್ದಾರೆ ಶಾಲೆಯ ಮುಖ್ಯ ಶಿಕ್ಷಕ ಶಿವರಾಮ್ ಹಾಗೂ ಸಿದ್ದಾಪುರ ಪದವಿಪೂರ್ವ ಕಾಲೇಜಿನ ಪ್ರಾಂಶು ಪಾಲ ಕಾಳೇಗೌಡ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜಿಎಸ್ ಸಂಸ್ಥೆಯ ವ್ಯವಸ್ಥಾಪಕ ಸುಧಾಕರ್ ವಹಿಸಿದ್ದರು. ಈ ಸಂದರ್ಭ ಸಿದ್ದಾಪುರ ಸಂಯುಕ್ತ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ರಮ್ಯಾ, ಪ್ರಸನ್ನ ಬಿ.ಎಸ್., ಜಶ್ಮಿ, ಅಮುದ ಬೋಜಮ್ಮ, ಅಶ್ವಿನಿ, ಬಿಜಿಎಸ್ ಶಿಕ್ಷಣ ಸಂಸ್ಥೆಯ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.