ಮಡಿಕೇರಿ, ಆ. 8: ವಿಶ್ವ ಆದಿಮಸಂಜಾತ ಬುಡಕಟ್ಟು ಜನಾಂಗಗಳ ಹಕ್ಕುಗಳ ದಿನಾಚರಣೆಯ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ತಾ. 9 ರಂದು (ಇಂದು) ಬೆಂಗಳೂರು ಚಲೋ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಟೌನ್ಹಾಲ್ ಮುಂಭಾಗದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ಸತ್ಯಾಗ್ರಹ ನಡೆಯಲಿದೆ ಎಂದು ತಿಳಿಸಿದರು. 1956 ಕ್ಕೆ ಮೊದಲು ಕೊಡವರ ಜನ್ಮ ಭೂಮಿ ಕೊಡಗು ರಾಜ್ಯವೆಂದು ವಿಜೃಂಬಿಸಿತ್ತು. ರಾಜ್ಯಗಳ ಪುನರ್ಘಟನೆಯ ತರುವಾಯ ನಮ್ಮ ಒಂದೊಂದೇ ಹಕ್ಕುಗಳನ್ನು ಆಡಳಿತಗಾರರು ಕಸಿದುಕೊಳ್ಳುತ್ತಾ ಬಂದ ಹಿನ್ನೆಲೆ ನಮ್ಮ ಹೆಗ್ಗುರುತು ಮತ್ತು ಸಂವಿಧಾನಿಕ ಹಕ್ಕುಗಳೆಲ್ಲವೂ ಮೂಲೆ ಗುಂಪಾಗಿದೆ ಎಂದು ನಾಚಪ್ಪ ಆರೋಪಿಸಿದರು.
ಸಿಎನ್ಸಿ ಸಂಘಟನೆ ಕಳೆದ 29 ವರ್ಷಗಳಿಂದ “ಕೊಡವ ಲ್ಯಾಂಡ್” ಸ್ವಾಯತ್ತತೆ, ಕೊಡವ ಬುಡಕಟ್ಟು ಜನಾಂಗವನ್ನು ಶೆಡ್ಯೂಲ್ ಪಟ್ಟಿಗೆ ಸೇರಿಸಿ ರಾಜ್ಯಾಂಗ ಭದ್ರತೆ, ಕೊಡವ ತಕ್ಕನ್ನು ಸಂವಿಧಾನದ 8ನೇ ಶೆಡ್ಯೂಲ್ಗೆ ಸೇರ್ಪಡೆಗೊಳಿಸುವದು ಮತ್ತು ಕೊಡವ ಬುಡಕಟ್ಟು ಕುಲವನ್ನು ವಿಶ್ವಸಂಸ್ಥೆಯ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿಸಬೇಕೆಂಬ ಹಕ್ಕೊತ್ತಾಯದೊಂದಿಗೆ ಹಲವು ಸಂವಿಧಾನಿಕ ಹಕ್ಕುಗಳ ಖಾತ್ರಿಗೋಸ್ಕರ ಆಹೋರಾತ್ರಿ ಹೋರಾಟ ಮಾಡುತ್ತಾ ಬಂದಿದೆ. ಇದೇ ಬೇಡಿಕೆಗಳನ್ನು ಮುಂದಿಟ್ಟುಕೊಂಡು ತಾ. 9 ರಂದು 25ನೇ ವರ್ಷದ ಬೆಂಗಳೂರು ಚಲೋ ಸತ್ಯಾಗ್ರಹವನ್ನು ಟೌನ್ಹಾಲ್ ಮುಂಭಾಗದಲ್ಲಿ ಶಾಂತಿಯುತವಾಗಿ ನಡೆಸಲಾಗುವದು ಎಂದರು.
ಸತ್ಯಾಗ್ರಹದಂದು ಅದಿಮಸಂಜಾತ ಕೊಡವ ಬುಡಕಟ್ಟು ಕುಲದ ಇರುವಿಕೆ ಮತ್ತವರ ಪೂರ್ವ, ವರ್ತಮಾನದ ಬದುಕಿಗೆ ಅನುಗುಣವಾಗಿ ಆಶ್ರಯಿಸಲಾಗುತ್ತಿದ್ದ ಅವರ ವಿಶಿಷ್ಟ ಕಲಾಕೌಶಲ್ಯವನ್ನು ನೆನಪಿಸುವ ಬುಡಕಟ್ಟು ಅಂಶಗಳನ್ನು ಸಮರ್ಥಿಸುವ ಪ್ರಾಚೀನ ಪರಂಪರೆಯ ದ್ಯೋತಕವಾದ ಅವರು ಸ್ವತಃ ದೈನಂದಿನವಾಗಿ ಬಳಸುತ್ತಿದ್ದ ಮತ್ತು ಇಂದಿಗೂ ಬಳಸುತ್ತಿರುವ ಬೆತ್ತ ಮತ್ತು ಬಿದಿರಿನ ಪರಿಕರಗಳನ್ನು ಪ್ರದರ್ಶಿಸಲಾಗುವದು ಎಂದು ನಾಚಪ್ಪ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಿಎನ್ಸಿ ಪ್ರಮುಖ ಕೂಪದಿರ ಸಾಬು ಉಪಸ್ಥಿತರಿದ್ದರು.