ಶ್ರೀಮಂಗಲ, ಆ. 7: ಬಿರುನಾಣಿ - ಹುದಿಕೇರಿ ನಡುವೆ ಹೈಸೊಡ್ಲೂರು ಬಳಿ ಭೂಕುಸಿತದಿಂದ ಈ ಮಾರ್ಗದ ಮೇಲೆ ಮಣ್ಣು ಬಿದ್ದು, ರಸ್ತೆ ಸಂಚಾರ ಕಡಿತವಾಗಿದೆ. ಆದ್ದರಿಂದ ಪರ್ಯಾಯವಾಗಿ ಬಿರುನಾಣಿಗೆ ಮತ್ತು ಬಾಡಗರಕೇರಿ ಮೃತ್ಯುಂಜಯ ದೇವಸ್ಥಾನಕ್ಕೆ ಹೋಗಲು ಟಿ. ಶೆಟ್ಟಿಗೇರಿ ಮೂಲಕ ತೆರಳಬೇಕಾಗಿದೆ.

ಕಳೆದ 24 ಗಂಟೆಯಲ್ಲಿ ಬೆಕ್ಕೆಸೊಡ್ಲೂರು, ಬಿರುನಾಣಿ, ಹುದಿಕೇರಿ ವಿಭಾಗಕ್ಕೆ 9 ರಿಂದ 13 ಇಂಚು ಮಳೆಯಾಗಿದೆ. ಬುಧವಾರ ಸಂಜೆಯವರೆಗೆ ಈ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನ ಮತ್ತು ಜಾನುವಾರುಗಳ ಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕೊಡಗಿನ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ಹಲವೆಡೆ ಮರ ಬಿದ್ದು ನೆಲಕ್ಕಚ್ಚಿದ್ದು, ವಿದ್ಯುತ್ ಕಡಿತವಾಗಿದೆ. ಗ್ರಾಮೀಣ ಭಾಗಕ್ಕೆ ಕಳೆದ 4 ದಿನದಿಂದ ವಿದ್ಯುತ್ ಕಡಿತ ಉಂಟಾಗಿದೆ.

ಶ್ರೀಮಂಗಲ, ಬಿರುನಾಣಿ, ಟಿ. ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ಬಿ.ಎಸ್.ಎನ್.ಎಲ್ ದೂರವಾಣಿ ಸೇವೆ ಸ್ಥಗಿತವಾಗಿದ್ದು, ವಿದ್ಯುತ್ ಇಲ್ಲದ ಕಾರಣ ಶ್ರೀಮಂಗಲ ಮತ್ತು ಕೆ.ಕೆ.ಆರ್. ಬಿ.ಎಸ್.ಎನ್.ಎಲ್ ಟವರ್ ಸ್ಥಗಿತವಾಗಿದ್ದು, ಈ 2 ಸ್ಥಳದಲ್ಲಿ ಬಿ.ಎಸ್.ಎನ್.ಎಲ್ ಇಲಾಖೆ ಜನರೇಟರ್‍ಗಳಿಗೆ ಡಿಸೇಲ್ ಪೂರೈಸದ ಹಿನ್ನೆಲೆಯಲ್ಲಿ ಬ್ಯಾಟರಿಗಳು ಚಾರ್ಜ್ ಆಗುತ್ತಿಲ್ಲ. ಶ್ರೀಮಂಗಲ, ಟಿ. ಶೆಟ್ಟಿಗೇರಿ ನಡುವೆ ಹಲವು ವಿದ್ಯುತ್ ಕಂಬಗಳು ಮಳೆಗೆ ನೆಲಕ್ಕಚ್ಚಿದೆ.