ಸಿದ್ದಾಪುರ, ಆ. 7: ಬಕ್ರೀದ್ ಹಾಗೂ ಅಖಂಡ ಭಾರತ ಸಂಕಲ್ಪ ದಿನ ಆಚರಣೆಗೆ ಸಂಬಂಧಿಸಿದಂತೆ, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮಡಿಕೇರಿ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು.

ಸಭೆಯಲ್ಲಿ ನೆಲ್ಯಹುದಿಕೇರಿ, ಸಿದ್ದಾಪುರ, ಗೂಡುಗದ್ದೆ, ಬೆಟ್ಟದ ಕಾಡು ವ್ಯಾಪ್ತಿಯ ಗ್ರಾಮಸ್ಥರು ಗ್ರಾಮದ ವ್ಯಾಪ್ತಿಯಲ್ಲಿ ಮಧ್ಯ ರಾತ್ರಿ ಸಂಶಯಾಸ್ಪದ ರೀತಿಯಲ್ಲಿ ಯುವಕರು ಸುತ್ತಾಡುತ್ತಿದ್ದು ಆತಂಕಕ್ಕೆ ಎಡೆಮಾಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ ಬಿಗಿಗೊಳಿಸಬೇಕೆಂದು ಮನವಿ ಮಾಡಿದರು. ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗೋ ಕಳ್ಳ ಸಾಗಾಣಿಕೆ ಪ್ರಕರಣಗಳು ಕಂಡುಬರುತ್ತಿದ್ದು ಪೊಲೀಸ್ ಇಲಾಖೆಯು ಗೋ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟುವಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದು ಪರ ಸಂಘಟನೆಗಳು ಮನವಿ ಮಾಡಿದರು.

ಸಭೆಯಲ್ಲಿ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಮಾತನಾಡಿದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಆಗಸ್ಟ್ 11 ರಂದು ಬಕ್ರೀದ್ ಹಾಗೂ ಅಖಂಡ ಭಾರತ ಸಂಕಲ್ಪ ದಿನ ಆಚರಣೆಗಳು ಶಾಂತಿಯುತವಾಗಿ ನಡೆಯಬೇಕು, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುವ ವ್ಯಕ್ತಿಗಳ ವಿರುದ್ದ ಇಲಾಖೆಯು ಕಠಿಣ ಕ್ರಮಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ಶಾಂತಿ ಸಭೆಯಲ್ಲಿ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ದಯಾನಂದ್, ಎ.ಎಸ್.ಐ. ಗಣಪತಿ ಹಾಗೂ ವಿವಿಧ ಸಂಘಟನೆಯ ಮುಖಂಡರಾದ ಪದ್ಮನಾಭ, ಶರಣ್, ಪ್ರಜೀತ್, ಕೆ.ಎಂ ಬಶೀರ್, ಎ.ಕೆ ಹಕೀಂ, ಅಶೋಕ್, ಸುರೇಶ್, ಪ್ರವೀಣ್, ಸತೀಶ್ ಇನ್ನಿತರರು ಹಾಜರಿದ್ದರು.