ಮಡಿಕೇರಿ, ಆ. 7: ಕೊಡಗು ಜಿಲ್ಲೆಯಾದ್ಯಂತ ವಾಯು-ವರುಣನ ಅಬ್ಬರ ಮುಂದುವರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನಷ್ಟು ತೀವ್ರತೆ ಕಾಣುತ್ತಿರುವ ಮಳೆ ಹೆಚ್ಚುತ್ತಿರುವ ಗಾಳಿಯ ರಭಸದಿಂದಾಗಿ ವಿವಿಧ ಸಮಸ್ಯೆಗಳು ಇದೀಗ ಉಲ್ಬಣಗೊಳ್ಳುತ್ತಿದೆ. ಅಲ್ಲಲ್ಲಿ ಮಣ್ಣು ಕುಸಿತ, ಮರಗಳು ಧರಾಶಾಹಿಯಾಗುತ್ತಿರುವದು, ದೂರವಾಣಿ, ವಿದ್ಯುತ್ ಸಂಪರ್ಕ ಕಡಿತ, ನೀರಿನ ಮಟ್ಟ ಏರಿಕೆಯಾಗುತ್ತಿರುವದರಿಂದ ಅಲ್ಲಲ್ಲಿ ರಸ್ತೆ ಸಂಪರ್ಕ ಕಡಿತದಂತಹ ಪ್ರಕರಣಗಳು ವರದಿಯಾಗುತ್ತಿದ್ದು, ಎಲ್ಲೆಲ್ಲೂ ಜನ-ಜೀವನಕ್ಕೆ ಸಮಸ್ಯೆ ಕಂಡುಬರುತ್ತಿದ್ದು, ಅಘೋಷಿತ ಬಂದ್‍ನಂತಹ ಪರಿಸ್ಥಿತಿ ಗೋಚರಿಸುತ್ತಿದೆ.ಜನಸಂಚಾರ ವಿರಳವಾಗಿದ್ದು, ವ್ಯಾಪಾರ-ವಹಿವಾಟುಗಳು ನೆಲಕಚ್ಚಿವೆ. ಶಾಲಾ-ಕಾಲೇಜುಗಳು ಮುಚ್ಚಲ್ಪಟ್ಟಿದ್ದರಿಂದ ಜನತೆ ಮನೆಗಳಿಂದ ಹೊರ ಬಾರದೆ ಇಡೀ ಜಿಲ್ಲೆ ಮಳೆಗಾಲದ ಆರ್ಭಟಕ್ಕೆ ನಲುಗುವಂತಾಗಿದೆ.ಕಳೆದ ಭಾನುವಾರದಿಂದಲೇ ಜಿಲ್ಲೆಯಲ್ಲಿ ಮಳೆಯ ರಭಸ ಆರಂಭಗೊಂಡಿದ್ದು, ಇದೀಗ ಮಳೆ-ಗಾಳಿ ಮತ್ತಷ್ಟು ಹೆಚ್ಚಾಗುತ್ತಿರುವದು ವಿವಿಧ ರೀತಿಯ ಅನಾಹುತಗಳಿಗೆ ಕಾರಣವಾಗುತ್ತಿವೆ. ನದಿ-ತೋಡು, ತೊರೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದ್ದು, ಅಲ್ಲಲ್ಲಿ ಪ್ರವಾಹ ಪರಿಸ್ಥಿತಿಯೂ ಉಂಟಾಗಿದೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ಪಾತ್ರದ ನಿವಾಸಿಗಳು ಇನ್ನಷ್ಟು ಆತಂಕಗೊಳ್ಳುವಂತಾಗಿದೆ. ಹಲವಾರು ಕಡೆಗಳಲ್ಲಿ ವಾಸದ ಮನೆಗಳಿಗೂ ಹಾನಿಯಾಗುತ್ತಿದ್ದು, ಹಲವೆಡೆ ಮನೆಗಳಿಗೆ ನೀರು ನುಗ್ಗಿರುವ ಘಟನೆಗಳೂ ವರದಿಯಾಗಿವೆ.
ಬ್ರಹ್ಮಗಿರಿ ತಪ್ಪಲು ಹಾಗೂ ಪುಷ್ಪಗಿರಿ ಬೆಟ್ಟ ಶ್ರೇಣಿಗಳಲ್ಲಿ ಮಳೆಯ ರಭಸ ಇನ್ನಷ್ಟು ಹೆಚ್ಚಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಎಂಟು ಇಂಚಿನಷ್ಟು ಹಾಗೂ ಇನ್ನೂ ಕೆಲವು ಕಡೆಗಳಲ್ಲಿ ಇದಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ.
ಭಾಗಮಂಡಲ, ಬೇತ್ರಿ, ನಾಪೋಕ್ಲು, ಸಿದ್ದಾಪುರ, ಕರಡಿಗೋಡು, ಕುಶಾಲನಗರ, ಕೂಡಿಗೆ ವ್ಯಾಪ್ತಿಯಲ್ಲಿ ಕಾವೇರಿ ಪ್ರವಾಹದ ಸ್ವರೂಪ ಪಡೆಯುತ್ತಿದ್ದರೆ ಇತ್ತ ಲಕ್ಷ್ಮಣ ತೀರ್ಥ ನದಿ (ಮೊದಲ ಪುಟದಿಂದ) ಹರಿಯುವ ಶ್ರೀಮಂಗಲ, ನಾಲ್ಕೇರಿ, ಕುಮಟೂರು, ಹರಿಹರ, ಕಾನೂರು, ಬಾಳೆಲೆ ವಿಭಾಗದಲ್ಲೂ ನೀರಿನ ಮಟ್ಟ ಅಪಾಯದ ಹಂತ ತಲಪಿದೆ. ನೂರಾರು ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿದ್ದು, ಸಮುದ್ರದ ರೀತಿಯ ನೋಟ ಕಂಡುಬರುತ್ತಿದೆ.
ಭಾಗಮಂಡಲ ಯಥಾಸ್ಥಿತಿ
ಭಾಗಮಂಡಲದಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಹೆಚ್ಚಾಗುತ್ತಿದೆ. ಕಳೆ 24 ಗಂಟೆಯಲ್ಲಿ 11.69 ಇಂಚು ಮಳೆ ಸುರಿದಿದೆ. ಸಂಗಮ ಭರ್ತಿಯಾಗಿದ್ದು, ಸುತ್ತಲಿನ ಪ್ರದೇಶಗಳು ಜಲಾವೃತಗೊಂಡಿದ್ದು, ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿವೆ. ಭಾಗಮಂಡಲ-ಮಡಿಕೇರಿ, ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದೆ.
ಹೊದ್ದೂರು, ನಾಪೋಕ್ಲು, ಮೂರ್ನಾಡು, ಬಲಮುರಿ ಮುಖ್ಯ ರಸ್ತೆಯಲ್ಲೂ ನೀರು ಆವರಿಸಿ ಸಂಪರ್ಕ ಕಡಿತಗೊಂಡಿದೆ. ಬೇತ್ರಿಯಲ್ಲಿ ಕಾವೇರಿ ಸೇತುವೆ ಮಟ್ಟಕ್ಕೆ ಹರಿಯುತ್ತಿದ್ದು, ಮಳೆ ಇನ್ನಷ್ಟು ಹೆಚ್ಚಾದರೆ ಮಡಿಕೇರಿ-ವೀರಾಜಪೇಟೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಹಟ್ಟಿಹೊಳೆ, ಮಾದಾಪುರ, ಮಾರ್ಗದಲ್ಲೂ ನೀರಿನ ಹರಿವು ಹೆಚ್ಚಾಗುತ್ತಿದೆ. ಕೊಳಕೇರಿಯಿಂದ ಕೋಕೇರಿಗೆ ಸಂಪರ್ಕ ಕಲ್ಪಿಸುವ ಕುಪ್ಪೋಟು ಹೊಳೆ ಸೇತುವೆ ಮೇಲೆ ನೀರು ನಿಂತಿದ್ದು, ಸಂಪರ್ಕ ಕಡಿತವಾಗಿದೆ. ಜಿಲ್ಲೆಯ ಹಲವಾರು ಕಡೆಗಳಲ್ಲಿ ಸಣ್ಣ ಸೇತುವೆಗಳ ಮೇಲೆ ನೀರು ನಿಂತಿದ್ದು, ಅಲ್ಲಲ್ಲಿ ಸಂಪರ್ಕ ಕಡಿತ ಗೊಂಡಿದೆ.
ಪ್ರವಾಹ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾಗಮಂಡಲದಲ್ಲಿ ಮಾತೆ ಕಾವೇರಿಗೆ ಸ್ಥಳೀಯರು ವಿಶೇಷ ಪೂಜೆ ನೆರವೇರಿಸಿದರು. ಮಂಗಳೂರು ಹೆದ್ದಾರಿ ಮತ್ತೆ ಕುಸಿತಗೊಂಡಿದ್ದು, ಸಂಚಾರಕ್ಕೆ ತೊಡಕುಂಟಾಗಿದೆ. ಸಿದ್ದಾಪುರ ವ್ಯಾಪ್ತಿಯ ಕರಡಿಗೋಡಿನಲ್ಲಿ 15 ಹಾಗೂ ಬೆಟ್ಟದಕಾಡುವಿನಲ್ಲಿ 4 ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಹಾರಂಗಿ ತುಂಬಲು 15 ಅಡಿ ನೀರಿನ ಅವಶ್ಯಕತೆಯಿದೆ. ವೀರಾಜಪೇಟೆ ವಿಭಾಗಕ್ಕೆ ವರ್ಷದ ದಾಖಲೆಯ ಸರಾಸರಿ 6 ಇಂಚು ಮಳೆ ಒಂದೇ ದಿನ ಸುರಿದಿದೆ.
ಕುಶಾಲನಗರ ವ್ಯಾಪ್ತಿಯ ತಗ್ಗುಪ್ರದೇಶದ ಬಡಾವಣೆಗಳ ನಿವಾಸಿಗಳು ಪ್ರವಾಹ ಭೀತಿಯಲ್ಲಿದ್ದಾರೆ. ಪೊನ್ನಂಪೇಟೆಯಲ್ಲಿ ಕೇಳರಿಯದ ಪ್ರಮಾಣದ ಮಳೆ ದಾಖಲಾಗಿದ್ದು, ಒಂದೇ ದಿನ 8.2 ಇಂಚು ಮಳೆ ಸುರಿದಿದೆ. ಸುಂಟಿಕೊಪ್ಪದಲ್ಲಿ ಭಾರೀ ಮಳೆ-ಗಾಳಿಗೆ ವಾಹನವೊಂದರ ಮೇಲೆ ಮರ ಬಿದ್ದು ಕಾರಿನಲ್ಲಿದ್ದವರು ಗಾಯಗೊಂಡ ಘಟನೆ ನಡೆದಿದೆ.
ಕೂಡಿಗೆ-ಕಣಿವೆ ಮಧ್ಯೆ ಬೇಸಾಯದ ಗದ್ದೆಗಳಿಗೆ ನೀರು ನುಗ್ಗಿದೆ. ಗೋಣಿಕೊಪ್ಪ ಪಟ್ಟಣದಲ್ಲಿ ವಿವಿಧ ಬಡಾವಣೆಗಳು ಜಲಾವೃತಗೊಂಡಿವೆ. ಶ್ರೀಮಂಗಲ-ನಾಲ್ಕೇರಿ ನಡುವೆ ಲಕ್ಷ್ಮಣ ತೀರ್ಥ ನದಿ ಸೇತುವೆ ಮೇಲೆ 4 ಅಡಿ ಎತ್ತರ ಹರಿಯುತ್ತಿದೆ. ದಕ್ಷಿಣ ಕೊಡಗಿನ ಬಹುತೇಕ ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ. ಜೋಡುಪಾಲ ಬಳಿ ರಸ್ತೆಗೆ ಮರ ಬಿದ್ದು, ತೆರವುಗೊಳಿಸಲಾಗಿದೆ. ಗೋಣಿಕೊಪ್ಪಲು ಕುಂದಾ ವ್ಯಾಪ್ತಿಯಲ್ಲಿ 65ಕ್ಕೂ ಅಧಿಕ ಆದಿವಾಸಿಗಳ ಕುಟುಂಬಕ್ಕೆ ತೊಂದರೆ ಉಂಟಾಗಿದ್ದು, ಗಂಜಿ ಕೇಂದ್ರಕ್ಕೆ ಸ್ಥಳಾಂತಗೊಳ್ಳಲು ನಿರಾಕರಿಸಿದ್ದಾರೆ.
ಹೊದ್ದೂರು-ನಾಪೋಕ್ಲು, ಮೂರ್ನಾಡು, ಬಲಮುರಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕರಡಿಗೋಡು ಮತ್ತು ಐಕೊಳಗಳಲ್ಲಿ ಪರಿಹಾರ ಕೇಂದ್ರ ಸ್ಥಾಪಿಸಲಾಗಿದ್ದು, ಇಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಸುಮನ್, ಜಿ.ಪಂ. ಸಿಇಓ, ಲಕ್ಷ್ಮಿಪ್ರಿಯ ಭೇಟಿ ನೀಡಿದ್ದಾರೆ. ಲಕ್ಷ್ಮಣ ಹೊಳೆಗೆ ಸೇರುವ ರಾಮತೀರ್ಥ ನದಿಯು ತುಂಬಿ ಹರಿಯುತ್ತಿದ್ದು, ನಾಲ್ಕೇರಿ, ಶ್ರೀಮಂಗಲ, ನಾಲ್ಕೇರಿ, ಪಲ್ಲೇರಿ ಸಂಪರ್ಕ ರಸ್ತೆ ಕಡಿತವಾಗಿದೆ.
ತಾ. 8 ರಂದು (ಇಂದು) ಮಡಿಕೇರಿಯಲ್ಲಿ ನಡೆಯಬೇಕಿದ್ದ ಯುವ ವಿಜ್ಞಾನಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ತಾ. 17ಕ್ಕೆ ಮುಂದೂಡಲಾಗಿದೆ. ಪೊನ್ನಂಪೇಟೆ-ಕುಟ್ಟ ಹೆದ್ದಾರಿಯಲ್ಲಿ ಭೂಕುಸಿತದ ಆತಂಕ ಎದುರಾಗಿದೆ. ದ. ಕೊಡಗಿನಲ್ಲಿ ಬಾಳೆ ತೋಟಗಳು, ಭತ್ತದ ಗದ್ದೆಗಳು, ಭತ್ತದ ಪೈರು, ಕಾಫಿ ತೋಟ ನದಿಯ ಪ್ರವಾಹಕ್ಕೆ ತುತ್ತಾಗಿವೆ.
ಬಿರುನಾಣಿ-ಹುದಿಕೇರಿ ನಡುವೆ ಹೈಸೊಡ್ಲೂರು ಬಳಿ ಭೂಕುಸಿತದಿಂದ ರಸ್ತೆ ಸಂಚಾರ ಕಡಿತಗೊಂಡಿದೆ. ನಾಪೋಕ್ಲು, ಮೂರ್ನಾಡು, ನಾಪೋಕ್ಲು-ಪಾರಾಣೆ, ಭಾಗಮಂಡಲ-ನಾಪೋಕ್ಲು ರಸ್ತೆಗೆ ಸಂಪರ್ಕ ಇಲ್ಲದಂತಾಗಿದೆ. ಶನಿವಾರಸಂತೆ ವ್ಯಾಪ್ತಿಯಲ್ಲಿ ರಭಸವಾಗಿ ಬೀಸುತ್ತಿರುವ ಗಾಳಿ ಜನತೆಯಲ್ಲಿ ಭೀತಿ ಮೂಡಿಸಿದೆ. ಶಾಸಕದ್ವಯರಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಇವರುಗಳು ಅವರವರುಗಳ ಕ್ಷೇತ್ರಗಳಲ್ಲಿ ತೊಂದರೆ ಉಂಟಾದ ಪ್ರದೇಶಗಳಿಗೆ ಭೇಟಿ ನೀಡಿ ಸತತ ಜನಸಂಪರ್ಕದಲ್ಲಿದ್ದು, ಸ್ಪಂದಿಸುತ್ತಿದ್ದಾರೆ.
ಪ್ರಸ್ತುತದ ಸನ್ನಿವೇಶ ಜಿಲ್ಲೆಯಾದ್ಯಂತ ಆತಂಕದ ಪರಿಸ್ಥಿತಿಯನ್ನು ಸೃಷ್ಟಿಸಿದ್ದು, ಜಿಲ್ಲಾಡಳಿತವೂ ಪರಿಸ್ಥಿತಿ ನಿಭಾಯಿಸಲು ತೀವ್ರ ಪ್ರಯತ್ನ ನಡೆಸುತ್ತಿದೆ.