ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ ಸರಾಸರಿ 5.82 ಇಂಚಿನಷ್ಟು ಮಳೆಯಾಗಿರುವದು ಪ್ರಸ್ತುತದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಜಿಲ್ಲಾ ಸರಾಸರಿ 5.82 ಇಂಚಿನಷ್ಟಾಗಿದ್ದರೆ ಮಡಿಕೇರಿ ತಾಲೂಕಿನಲ್ಲಿ 7.53 ಇಂಚು, ವೀರಾಜಪೇಟೆ ತಾಲೂಕಿನಲ್ಲಿ 5.70 ಇಂಚು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 4.23 ಇಂಚಿನಷ್ಟು ಸರಾಸರಿ ಮಳೆ ಕಳೆದ 24 ಗಂಟೆಗಳಲ್ಲಿ ಸುರಿದಿದೆ.
2018ರ ಸಾಲಿಗೆ ಹೋಲಿಸಿದರೆ ಅಂಕಿ ಅಂಶ ಕಡಿಮೆ ಇದ್ದರೂ, ಪ್ರಸ್ತುತ ಈ ತನಕ ಕ್ಷೀಣಗೊಂಡಿದ್ದ ಮುಂಗಾರು ಕೇವಲ ನಾಲ್ಕೈದು ದಿನಗಳಲ್ಲಿ ಅಧಿಕ ಪ್ರಮಾಣದಲ್ಲಿ ಸುರಿದಿರುವದು ಕಂಡುಬರುತ್ತಿದೆ. ಜಿಲ್ಲೆಯಲ್ಲಿ ಕಳೆದ ವರ್ಷ ಜನವರಿಯಿಂದ ಈತನಕ 105.90 ಇಂಚು ಮಳೆಯಾಗಿದ್ದರೆ ಈ ವರ್ಷ ಈ ಅವಧಿಯಲ್ಲಿ 52.17 ಇಂಚು ಸರಾಸರಿ ಮಳೆಯಾಗಿದೆ. ಆದರೆ ಭಾನುವಾರದ ತನಕವೂ ಕಡಿಮೆಯಿದ್ದ ಈ ಪ್ರಮಾಣ ದಿಢೀರ್ ಏರಿಕೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಈ ವರ್ಷ ಜನವರಿಯಿಂದ ಈವರೆಗೆ 69.78 ಇಂಚು ಮಳೆಯಾಗಿದ್ದು, ಕಳೆದ ಸಾಲಿನಲ್ಲಿ ಈ ಪ್ರಮಾಣ 148 ಇಂಚಿನಷ್ಟಾಗಿತ್ತು.
ವೀರಾಜಪೇಟೆ ತಾಲೂಕಿನಲ್ಲಿ ಕಳೆದ ವರ್ಷ 84.28 ಇಂಚು ಮಳೆಯಾಗಿದ್ದರೆ ಈ ಬಾರಿ 54.22 ಇಂಚು ಮಳೆಯಾಗಿದೆ.
ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ಸಾಲಿನಲ್ಲಿ ಈತನಕ 84.49 ಇಂಚು ಮಳೆಯಾಗಿದ್ದು, ಪ್ರಸಕ್ತ ವರ್ಷ 32.54 ಇಂಚು ಮಳೆಯಾಗಿದೆ.
ಪೊನ್ನಂಪೇಟೆಗೆ ಅಧಿಕ
ಕಳೆದ 24 ಗಂಟೆಯಲ್ಲಿ ಶಾಂತಳ್ಳಿ ಹಾಗೂ ಪೊನ್ನಂಪೇಟೆ ಹೋಬಳಿಗೂ ಅಧಿಕ ಮಳೆಯಾಗಿದೆ. ಶಾಂತಳ್ಳಿಯಲ್ಲಿ 8.88 ಇಂಚು ಹಾಗೂ ಪೊನ್ನಂಪೇಟೆಯಲ್ಲಿ 8.20 ಇಂಚು ಮಳೆ ದಾಖಲಾಗಿದೆ. ಉಳಿದಂತೆ ನಾಪೋಕ್ಲು 7.88 ಇಂಚು, ಮಡಿಕೇರಿ ಕಸಬಾ 5.57, ವೀರಾಜಪೇಟೆ 6.16, ಹುದಿಕೇರಿ 5.76, ಶ್ರೀಮಂಗಲ 7.23 ಅಮ್ಮತ್ತಿ 4.12, ಸೋಮವಾರಪೇಟೆ ಕಸಬಾ 4.87, ಶನಿವಾರಸಂತೆ 4.16, ಕೊಡ್ಲಿಪೇಟೆ 4.08, ಇಂಚು ಮಳೆಯಾಗಿದೆ.