ಗೋಣಿಕೊಪ್ಪ ವರದಿ, ಆ. 7: ದಕ್ಷಿಣ ಕೊಡಗಿನಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. 66 ಕೆವಿ ವಿದ್ಯುತ್ ಮಾರ್ಗದ ತಂತಿಯ ಮೇಲೆ ತಿತಿಮತಿ ಸಮೀಪದ ಅರಣ್ಯದಲ್ಲಿ ಮರ ಬಿದ್ದು, ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದೆ ಪರದಾಡುವಂತಾ ಯಿತು. ಗೋಣಿಕೊಪ್ಪ, ಮಾಯಮುಡಿ, ತಿತಿಮತಿ, ಬಾಳೆಲೆ, ಹುದಿಕೇರಿ, ಶ್ರೀಮಂಗಲ, ಕುಟ್ಟ, ಬಾಡಗರಕೇರಿ, ಬಲ್ಯಮುಂಡೂರು ಸೇರಿದಂತೆ ಹಲವಾರು ಕಡೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಮಳೆಯೊಂದಿಗೆ ಜೋರಾದ ಗಾಳಿ ಬೀಸುತ್ತಿದೆ. ಕೆಲವು ಕಡೆ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಮರದ ಕೊಂಬೆಗಳು ರಸ್ತೆಯ ಮೇಲೆ ಬಿದ್ದು ವಾಹನ ಸಂಚಾರಕ್ಕೆ ತಡೆಯುಂಟಾಗಿದೆ.

ಲಕ್ಷ್ಮಣತೀರ್ಥ ನದಿಪಾತ್ರದ ಬಹುತೇಕ ಗದ್ದೆಗಳು ಜಲಾವೃತವಾಗಿದೆ. ರೈತರು ನಾಟಿ ಕೆಲಸ ಮುಗಿಸಿದ್ದರು. ಆದರೆ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ಪೈರು ಕೊಳೆತು ಹೋಗುವ ಆತಂಕ ಎದುರಾಗಿದೆ.

ಕುರ್ಚಿ ಗ್ರಾಮದಲ್ಲಿ ಮಂಗಳವಾರ 9 ಇಂಚು ಮಳೆ ಸುರಿದ ಕಾರಣ ಕೃಷಿಕರು ಭತ್ತದ ನಾಟಿ ಮಾಡಲು ಸಿದ್ದಪಡಿಸಿದ್ದ ಸಸಿಮಡಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ತೂಚಮಕೇರಿಯಲ್ಲಿ ಗದ್ದೆ ಜಲಾವೃತವಾಗಿದೆ. ಕೃಷಿ ಚಟುವಟಿಕೆ ಬಹುತೇಕ ನಿಂತುಹೋಗಿದೆ.

ಪೋಕಳತೋಡುವಿನಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಅಪಾಯ ಪರಿಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣ ಕಾರ್ಯಾಚರಣೆಗಿಳಿದ ಸೆಸ್ಕ್ ಸ್ಪಂದನೆಯಿಂದ ಪ್ರಾಣಾಪಾಯ ಸಂಭವಿಸಿಲ್ಲ. ಎಇಇ ಅಂಕಯ್ಯ ನೇತೃತ್ವದಲ್ಲಿ ವಿದ್ಯುತ್ ಕಂಬವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಹುದಿಕೇರಿ, ಶ್ರೀಮಂಗಲ ಭಾಗದಲ್ಲಿ ಗಾಳಿಯ ರಭಸ ಜೋರಾಗಿತ್ತು. ರಸ್ತೆಯಲ್ಲಿ ಮರದ ಕೊಂಬೆಗಳು ಬಿದ್ದು ಸಂಚಾರದಲ್ಲಿ ವ್ಯತ್ಯಯವಾಯಿತು. ಯಾವದೇ ಪ್ರಾಣಹಾನಿ ಸಂಭವಿಸಿಲ್ಲ. ಕುರ್ಚಿ, ಬೀರುಗ ಹಾಗೂ ನೆಮ್ಮಲೆ ಭಾಗಗಳಲ್ಲಿ ಗಾಳಿಯಿಂದ ತೋಟಗಳಲ್ಲಿ ಮರಗಳು ಧರೆಗುರುಳಿವೆ. ಬಿರುನಾಣಿ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

ಲಕ್ಷ್ಮಣತೀರ್ಥ ನದಿಯ ಹರಿವಿನ ಪ್ರಮಾಣ ಹೆಚ್ಚಾಗಿದೆ. ಬಲ್ಯಮುಂಡೂರು - ಹರಿಹರ ಸಂಪರ್ಕ ಕಡಿತಗೊಂಡಿದೆ. ಶ್ರೀಮಂಗಲ ಭಾಗದ ನಾಲ್ಕೇರಿ, ಪಲ್ಲೇರಿ, ಸೊಡ್ಲೂರು ಭಾಗಗಳಲ್ಲಿ ಸಂಪರ್ಕ ಸ್ಥಗಿತಗೊಂಡಿದೆ.

ಹೈಸೊಡ್ಲೂರುವಿನಲ್ಲಿ ಕಕ್ಕಟ್‍ಪೊಳೆ ನದಿ ನೀರು ರಸ್ತೆ ಮೇಲೆ ಹರಿಯುತ್ತಿರುವ ಕಾರಣ ಹುದಿಕೇರಿ ಬಿರುನಾಣಿ ಸಂಪರ್ಕ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಹಳ್ಳಿಗಟ್ಟು ಬೇಗೂರು ಸೇತುವೆ ಮೇಲೆ ನೀರು ಬಂದು ಸಂಪರ್ಕ ಕಡಿತಗೊಂಡಿದೆ.

ಬೆಸಗೂರು ಸೇತುವೆ ಮೂಲಕ ಹರಿಯುವ ಕೀರೆಹೊಳೆ ನದಿಯ ನೀರು ಸೇತುವೆ ಮೇಲೆ ಹರಿಯುತ್ತಿದೆ. ಸಂಚಾರ ಸ್ಥಗಿತಗೊಂಡಿದೆ. ಬೆಸಗೂರು ಗ್ರಾಮಸ್ಥರು ಕಿರುಗೂರು ಮೂಲಕ ಪಟ್ಟಣಕ್ಕೆ ಬರಬೇಕಿದೆ.

ಹುದಿಕೇರಿ-ಬಿರುನಾಣಿ ಸಂಪರ್ಕ ರಸ್ತೆಯ ಹೈಸೊಡ್ಲೂರು ಎಂಬಲ್ಲಿ ಬರೆ ಕುಸಿದು ಸಂಪರ್ಕ ಕಡಿತಗೊಂಡಿತು. ಹುದಿಕೇರಿ ಕಂದಾಯ ಇಲಾಖೆ ವತಿಯಿಂದ ಮಣ್ಣನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.

ದಕ್ಷಿಣ ಕೊಡಗಿನಲ್ಲಿ ಲಕ್ಷ್ಮಣ ತೀರ್ಥ ನದಿ ಪ್ರವಾಹದಿಂದ ನದಿಪಾತ್ರದ ಗ್ರಾಮಗಳ ಗದ್ದೆಗಳು ಜಲಾವೃತವಾಗಿದೆ. ಹರಿಹರದಲ್ಲಿ ಸಂಪರ್ಕ ಸಂಪೂರ್ಣ ಕಡಿತ ಗೊಂಡಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.

ಕೀರೆ ಹೊಳೆ ಸೇತುವೆ ಮೇಲೆ ಹರಿಯುತ್ತಿರುವದರಿಂದ ಬೆಸಗೂರು ಗ್ರಾಮಕ್ಕೆ ಕಾನೂರು ಮುಖ್ಯರಸ್ತೆಯಿಂದ ಸಂಪರ್ಕವಿಲ್ಲದಾಗಿದೆ. ಅಲ್ಲಿನವರು ಕಿರುಗೂರು ಮಾರ್ಗವಾಗಿ ಪಟ್ಟಣಕ್ಕೆ ಬರುವಂತಾಗಿದೆ.

ದಿನವಿಡೀ ಸುರಿಯುತ್ತಿರುವ ಮಳೆಯಿಂದಾಗಿ ಕಾರ್ಮಿಕರು, ಕೃಷಿಕರು ಕೃಷಿಯಿಂದ ದೂರ ಉಳಿದಿದ್ದಾರೆ. ಗದ್ದೆಗಳು ಜಲಾವೃತ ಗೊಂಡಿರುವದರಿಂದ ನಾಟಿ ಕಾರ್ಯ ಸ್ಥಗಿತಗೊಂಡಿದೆ. ನಾಟಿ ಮಾಡಿರುವ ಗದ್ದೆಗಳು ನೀರಿನಲ್ಲಿ ಮುಳುಗಿವೆ. ಕೃಷಿಕನನ್ನು ನಷ್ಟದ ಹಾದಿಯತ್ತ ತಳ್ಳಿದೆ.

66 ಕೆವಿ ವಿದ್ಯುತ್ ಮಾರ್ಗದ ತಂತಿಯ ಮೇಲೆ ತಿತಿಮತಿ ಸಮೀಪದ ಅರಣ್ಯದಲ್ಲಿ ಮರ ಬಿದ್ದು ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಇಲ್ಲದೆ ಪರದಾಡುವಂತಾ ಯಿತು. ಗೋಣಿಕೊಪ್ಪ, ವೀರಾಜಪೇಟೆ, ಮೂರ್ನಾಡು, ಪೊನ್ನಂಪೇಟೆ ಮಾರ್ಗದಲ್ಲಿ ವಿದ್ಯುತ್ ಕಡಿತ ಉಂಟಾಗಿದೆ.

- ಸುದ್ದಿಪುತ್ರ