ಪೊನ್ನಂಪೇಟೆ, ಆ. 7: ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ, ಕೀರೆಹೊಳೆ ಹಾಗೂ ವೆಂಕಟಪ್ಪ ಬಡವಣೆಯ ಕೈತೋಡು ತುಂಬಿಹರಿದು ಬಡಾವಣೆಯ ಕೆಲವೊಂದು ಮನೆಗಳಿಗೆ ನೀರು ನುಗ್ಗಿದೆ. ನೆನ್ನೆ ನಡುರಾತ್ರಿ ಬಡಾವಣೆಯ ನಿವಾಸಿ ದಾವೂದ್‍ರವರ ಮನೆಗೆ ಅಪಾರ ಪ್ರಮಾಣ ನೀರುನುಗ್ಗಿದ ಪರಿಣಾಮ ಮನೆ ಸಂಪೂರ್ಣ ಜಲಾವೃತವಾಗಿ ಮನೆಯ ಸರ್ವಸ್ವವೂ ನೀರುಪಾಲಾಗಿದೆ ಅದೃಷ್ಟವಶಾತ್ ಯಾವದೇ ಪ್ರಾಣಹಾನಿ ಸಂಭವಿಸಿರುವದಿಲ್ಲ. ಸದ್ಯ ದಾವೂದ್ ಹಾಗೂ ಅವರ, ಕುಟುಂಬ ಅವರ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದು, ಘಟನಾ ಸ್ಥಳಕೆ ತಾಲೂಕಿನ ತಹಶೀಲ್ದಾರ್ ಪುರಂದರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಗ್ರಾಮ ಪಂಚಾಯತಿ ಅಧಿಕಾರಿಗಳನ್ನು ಬರಮಾಡಿ ಕೊಂಡು ಈ ಘಟನೆಗೆ ಕಾರಣವಾಗಿರುವ ಕೈತೋಡುವಿನ ಸಮೀಪ ತಡೆಗೋಡೆ ನಿರ್ಮಾಣ ಹಾಗೂ ನೀರಿನ ಸರಾಗ ಹರಿವಿಗೆ ತಡೆಯಾಗಿರುವ ಕುರಿತು ಪ್ರಶ್ನಿಸಿದರು. ತಹಶೀಲ್ದಾರರ ಪ್ರಶ್ನೆಗೆ ಉತ್ತರಿಸಿದ ಲೆಕ್ಕಾಧಿಕಾರಿ ಪ್ರಕಾಶ್‍ರವರು. ಹಿಂದಿನ ಅಧಿಕಾರಿ ಅವರವರ ಸ್ವಂತ ಜಾಗದಲ್ಲಿ ತಡೆಗೋಡೆ ನಿರ್ಮಿಸಲು ಪರವಾನಿಗೆ ನೀಡುರುವದಾಗಿ ಹೇಳಿಕೆ ನೀಡಿ ದಾಖಲೆಯನ್ನು ಹಾಜರುಪಡಿಸಿದರು. ಈ ಸಂದರ್ಭ ತಹಶೀಲ್ದಾರ್‍ರವರು ಘಟನಾ ಸ್ಥಳದಿಂದಲೇ ತಾಲೂಕು ಕಾರ್ಯನಿರ್ವಹಣಾ ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೆ ನುಗ್ಗಿರುವ ನೀರನ್ನು ತೆರವು ಮಾಡುವಂತೆ ಆದೇಶ ನೀಡಿದರು.
ಮಾದ್ಯಮಕ್ಕೆ ಪ್ರತಿಕ್ರಿಯೆ ನೀಡಿದ ತಹಶೀಲ್ದಾರರು ಕೀರೆಹೊಳೆ ಹಾಗೂ ವೆಂಕಟಪ್ಪ ಬಡವಣೆಯ ಕೈತೋಡಿನಲ್ಲಿ ಅಕ್ರಮ ಒತ್ತುವರಿಯಿಂದಾಗಿ ಈ ಸಮಸ್ಯೆ ಎದುರಾಗಿರುವದು. ಈಗ ತಮ್ಮ ಗಮನಕ್ಕೆ ಬಂದಿದ್ದು, ಈ ಕುರಿತು ತಕ್ಷಣ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ ಎಂದರು.
ಶ್ರೀಧರ್ ನೆಲ್ಲಿತ್ತಾಯ