ಮಡಿಕೇರಿ, ಆ. 7: ಸಮಾಜ ಸೇವೆಯ ಮನಸ್ಥಿತಿಯುಳ್ಳ ಮಹಿಳೆಯರಿಗೆ ಇನ್ನರ್ ವೀಲ್ ಕ್ಲಬ್ ಸೂಕ್ತ ವೇದಿಕೆಯಾಗಿದ್ದು, ಮಾನವೀಯತೆಯೊಂದಿಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಲಕ್ಷಾಂತರ ಮಹಿಳೆಯರು ಇನ್ನರ್ ವೀಲ್ ಮೂಲಕ ಸಕ್ರಿಯರಾಗಿದ್ದಾರೆ ಎಂದು ಇನ್ನರ್ ವೀಲ್ ಜಿಲ್ಲೆ 318ನ ಅಧ್ಯಕ್ಷೆ ಅನುರಾಧ ನಂದಕುಮಾರ್ ತಿಳಿಸಿದ್ದಾರೆ. ಮಡಿಕೇರಿ ಇನ್ನರ್ ವೀಲ್ ಸಂಸ್ಥೆಗೆ ಅಧಿಕೃತ ಭೇಟಿ ನೀಡಿ ಅನುರಾಧ ನಂದಕುಮಾರ್ ಮಾತನಾಡಿದರು.

ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ವಿಶೇಷಚೇತನ ಸಾಧಕಿ ಮೇಕೇರಿ ಗ್ರಾಮದ ಈಶ್ವರಿ, ಕಾಲೂರು ಗ್ರಾಮದ ಸಂತ್ರಸ್ತ ಮಹಿಳೆಯರಿಗೆ ಟೈಲರಿಂಗ್ ತರಬೇತಿ ನೀಡಿದ ಮಡಿಕೇರಿಯ ಅಶ್ರಫುನ್ನೀಸಾ, ಮದೆ ಪ್ರಾಥಮಿಕ ಶಾಲಾ ಶಿಕ್ಷಕಿ ಪಿ.ಕೆ. ಭಾಗ್ಯಲಕ್ಷ್ಮಿಅವರನ್ನು ಅನುರಾಧ ನಂದಕುಮಾರ್ ಸನ್ಮಾನಿಸಿ ಗೌರವಿಸಿದರು. ಮಡಿಕೇರಿ ರೋಟರಿ ಅಧ್ಯಕ್ಷರತನ್ ತಮ್ಮಯ್ಯ ಇನ್ನರ್ ವೀಲ್‍ನ ವಾರ್ತಾ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ರೋಟರಿ ಜಿಲ್ಲಾ ಖಜಾಂಚಿ ಪೂರ್ಣಿಮ ರವಿ, ಇನ್ನರ್ ವೀಲ್ ಅಧ್ಯಕ್ಷೆ ನಿಶಾ ಮೋಹನ್, ಕಾರ್ಯದರ್ಶಿ ಶಫಾಲಿ ರೈ ವೇದಿಕೆಯಲ್ಲಿದ್ದರು. ಲಕ್ಷ್ಮಿಈಶ್ವರ ಭಟ್ ಪ್ರಾರ್ಥಿಸಿ ಲತಾಚಂಗಪ್ಪ, ನಮಿತಾರೈ, ಪ್ರಿಯಜಗದೀಶ್, ರೂಪಾ ಸುಮಂತ್, ವಿಜಯಲಕ್ಷ್ಮಿಚೇತನ್, ಬೊಳ್ಳು ಮೇದಪ್ಪ, ಲಲಿತಾ ರಾಘವನ್, ಶಮ್ಮಿ ಪ್ರಭು ನಿರೂಪಿಸಿದರು.