ವೀರಾಜಪೇಟೆ, ಆ. 7: ವೀರಾಜಪೇಟೆ ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಮಿತಿಗೊಳಪಟ್ಟು ಪಟ್ಟಣದ ರಸ್ತೆ ಅಗಲೀಕರಣ ಮಾಡುವದಕ್ಕೆ ವಿರೋಧವಿಲ್ಲ. ಆದರೆ ರಸ್ತೆ ಅಗಲೀಕರಣದಿಂದ ನಷ್ಟ ಅನುಭವಿಸುವ ಜಾಗದ ಮಾಲೀಕರಿಗೆ ಕಾನೂನು ಬದ್ಧವಾಗಿ ಇಂದಿನ ಮಾರುಕಟ್ಟೆ ಬೆಲೆಗನುಗುಣವಾಗಿ ಸೂಕ್ತ ಪರಿಹಾರ ನೀಡಲೇಬೇಕು ಎಂದು ಪ.ಪಂ. ಸದಸ್ಯ ಡಿ.ಪಿ. ರಾಜೇಶ್ ಒತ್ತಾಯಿಸಿದರು.

ವೀರಾಜಪೇಟೆ ಪ್ರೆಸ್‍ಕ್ಲಬ್‍ನಲ್ಲಿ ಪ.ಪಂ. ಸದಸ್ಯರ ಪರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜೇಶ್, ಈ ಹಿಂದೆ ಪ.ಪಂ. ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವಾಗ ರಸ್ತೆಯ ಮಧ್ಯಭಾಗದಿಂದ 40 ಅಡಿ ಬಿಟ್ಟು ಕಾಮಗಾರಿ ನಡೆಸುವಂತೆ ಅನುಮತಿ ನೀಡಲಾಗಿತ್ತು. ಆದರೆ ಈಗ 50 ಅಡಿಗೆ ಗುರುತು ಹಾಕಲಾಗುತ್ತಿರುವ ಔಚಿತ್ಯವೇನು? ಪಟ್ಟಣದ ಅಗಲೀಕರಣ ಗೊಳ್ಳುವ ರಸ್ತೆ ಇಕ್ಕೆಲದಲ್ಲಿನ ಜಾಗಗಳ ಮಾಲೀಕರಿಗೆ ರಸ್ತೆ ಎಷ್ಟು ಮೀಟರ್ ಅಗಲೀಕರಣ ಗೊಳ್ಳಲಿದೆ ಎನ್ನುವ ಮಾಹಿತಿ ಇಲ್ಲ. ಇದರಿಂದಾಗಿ ಅವರು ಆತಂಕಕ್ಕೆ ಒಳಗಾಗುವಂತಾಗಿದೆ. ಅಧಿಕಾರಿಗಳು ರಸ್ತೆ ಅಗಲೀಕರಣ ಗೊಳ್ಳುವ ಜಾಗವು ಸರಕಾರಿ ಜಾಗ ಎನ್ನುತ್ತಿದ್ದಾರೆ. ಆದರೆ ಅದೇ ಜಾಗಕ್ಕೆ ಕಂದಾಯ ಕಟ್ಟಿಸಿಕೊಳ್ಳಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಮಿತಿಗೊಳಪಟ್ಟು ರಸ್ತೆ ವಿಸ್ತರಣೆಯ ಸಂದರ್ಭ ನ್ಯಾಯಾಲಯದ ಸೂಚನೆಯಂತೆ ಜಾಗದ ಮಾಲೀಕರಿಗೆ ಪರಿಹಾರ ನೀಡಿ ದಂತೆ ಜಾಗದ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದರು. ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಎಸ್.ಹೆಚ್. ಮತೀನ್ ಮಾತನಾಡಿ, ಪಟ್ಟಣ ಪಂಚಾಯಿತಿ ಚುನಾಯಿತ ಸದಸ್ಯರ ಗಮನಕ್ಕೆ ತಾರದೆ ಮುಖ್ಯಾಧಿಕಾರಿ ಅವರು ರಸ್ತೆ ಅಗಲೀಕರಣದ ಸರ್ವೆಗೆ ಚಾಲನೆ ನೀಡಿದ್ದಾರೆ. ರಸ್ತೆ ಅಗಲೀಕರಣದ ಎಲ್ಲ ನಿಯಮ ನಿಬಂಧನೆಗಳನ್ನು ಗಾಳಿಗೆ ತೂರಿ ಏಕಚಕ್ರಾಧಿಪತ್ಯರಂತೆ ವರ್ತಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ಆದೇಶದಂತೆ ವೀರಾಜಪೇಟೆ ಮಗ್ಗುಲದಿಂದ ಮೀನುಪೇಟೆಯ ಗೇಟ್ ತನಕ ರಸ್ತೆ ಪಟ್ಟಣ ಪಂಚಾಯಿತಿಗೆ ಸೇರಿದುದಾಗಿದೆ. ರಸ್ತೆ ಅಗಲೀಕರಣದ ಅಂತರದ ಬಗ್ಗೆ ಅಂತಿಮ ತೀರ್ಮಾನ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ವಿಚಾರ ವಿನಿಮಯದ ಮೂಲಕ ಆಗ ಬೇಕಾಗಿದೆ. ಪಟ್ಟಣ ಪಂಚಾಯಿತಿಗೆ ಇನ್ನೂ ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣೆ ನಡೆಯದೆ ಸದಸ್ಯರುಗಳು ಸೇರಿ ಸಭೆ ನಡೆಸದೆ ತೆರೆಮರೆಯ ಕಸರತ್ತಿನ ಅಗಲೀಕರಣ ಯೋಜನೆಗೆ ಅವಕಾಶವಿಲ್ಲ ಎಂದು ದೂರಿದರು.

ಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಮಹಮದ್ ರಾಫಿ, ರಜಿನಿಕಾಂತ್ ಹಾಗೂ ಅಬ್ದುಲ್ ಜಲೀಲ್ ಮಾತನಾಡಿದರು.