ಶ್ರೀಮಂಗಲ, ಆ. 7 : ದಕ್ಷಿಣ ಕೊಡಗಿನ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಹಾ ಮಳೆಯಿಂದ ಈ ವ್ಯಾಪ್ತಿಯ ಬೆಳೆಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿ ಯಾಗಿದೆ. ಬಹಳಷ್ಟು ನಾಟಿಯಾಗಿರುವ ಭತ್ತದ ಗದ್ದೆಗಳು ಜಲಾವೃತವಾಗಿದ್ದು, ಬಾಳೆ ಫಸಲು ನೆಲಕ್ಕಚ್ಚಿದೆ. ತೋಟಗಳಲ್ಲಿ ಗಾಳಿ ಮಳೆಗೆ ಮರಗಳು ಬಿದ್ದು, ಕಾಳು ಮೆಣಸು ಮತ್ತು ಕಾಫಿ ಫಸಲಿಗೆ ದೊಡ್ಡ ಮಟ್ಟದ ಹಾನಿ ಮಾಡಿದೆ.
ನಾಲ್ಕೇರಿ ಗ್ರಾಮದ ಕೆ.ಎಂ. ಮಹೇಶ್ ಅವರಿಗೆ ಸೇರಿದ ಗೊನೆಬಿಟ್ಟು ಅರ್ಧ ಬೆಳೆದಿದ್ದ ಸುಮಾರು 5 ಎಕರೆ ಬಾಳೆ ತೋಟ ಬಹುತೇಕ ಪ್ರವಾಹಕ್ಕೆ ಸಿಲುಕಿದ್ದು, ಗಾಳಿಗೆ ಗೊನೆ ಸಹಿತ ನೆಲಕ್ಕಚ್ಚಿದೆ.
ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ನಾಟಿಯಾಗಿರುವ ಸುಮಾರು 200 ಎಕರೆ ಭತ್ತದ ಗದ್ದೆ ಜಲಾವೃತವಾಗಿದ್ದು, ಇದೇ ಗ್ರಾಮದಲ್ಲಿ ನಾಟಿ ಮಾಡಲು ಕಿತ್ತು ಇಟ್ಟಿದ್ದ ಭತ್ತದ ಪೈರು ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ಪ್ರವಾಹದಲ್ಲಿ ಪೈರು ತೇಲುತ್ತಿರುವದು ಕಂಡುಬಂದಿದೆ. ಇದರಿಂದ ಮತ್ತೆ ಬಿತ್ತನೆ ಮಾಡಿ ನಾಟಿ ಮಾಡುವದು ದುಸ್ತರವಾಗಿದೆ ಎಂದು ಗ್ರಾಮದ ರೈತ ಮುಖಂಡ ಮಲ್ಲಮಾಡ ಪ್ರಭು ಪೂಣಚ್ಚ ಅಳಲು ತೋಡಿಕೊಂಡಿದ್ದಾರೆ.
ಶ್ರೀಮಂಗಲದಲ್ಲಿ ಬಾಳೆ ತೋಟ ಲಕ್ಷ್ಮಣ ತೀರ್ಥ ಪ್ರವಾಹಕ್ಕೆ ಸಿಲುಕಿ ಮುಳುಗಡೆಯಾಗಿದ್ದು, ಬಲ್ಯಮಂಡೂರು, ಶ್ರೀಮಂಗಲ ವ್ಯಾಪ್ತಿಯಲ್ಲಿ ಕಾಫಿ ತೋಟ ಸಹ ಲಕ್ಷ್ಮಣ ತೀರ್ಥ ನದಿಯ ಪ್ರವಾಹಕ್ಕೆ ಜಲಾವೃತವಾಗಿದೆ.
ಶ್ರೀಮಂಗಲ ವ್ಯಾಪ್ತಿಯ ಘಟ್ಟ ಪ್ರದೇಶದಲ್ಲಿ ತೀವ್ರ ಮಳೆಯಾಗುತ್ತಿದ್ದು, ಲಕ್ಷ್ಮಣ ತೀರ್ಥ ನದಿ ಉಗಮಸ್ಥಾನ ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿ ಧಾರಕಾರ ಮಳೆಯಿಂದ ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ನದಿ ಪಾತ್ರದ ಹರಿಹರ, ಬಲ್ಯಮಂಡೂರು, ನಾಲ್ಕೇರಿ, ಕಾನೂರು, ಬೆಕ್ಕೆಸೊಡ್ಲೂರು, ಕೊಟ್ಟಗೇರಿ, ಚಿಕ್ಕಮಂಡೂರು, ನಿಟ್ಟೂರು, ಬಾಳೆಲೆ ವ್ಯಾಪ್ತಿಯ ಭತ್ತದ ಗದ್ದೆಗಳು ಲಕ್ಷ್ಮಣ ತೀರ್ಥ ಪ್ರವಾಹಕ್ಕೆ ಜಲಾವೃತವಾಗಿದೆ.
ಬಿರುನಾಣಿ ವ್ಯಾಪ್ತಿಯಲ್ಲಿ ತೀವ್ರ ಮಳೆ ಸುರಿಯುತ್ತಿರುವದರಿಂದ ಈ ವ್ಯಾಪ್ತಿಯಲ್ಲಿ ಹುಟ್ಟಿ ಹರಿಯುತ್ತಿರುವ ಕಕ್ಕಟ್ಟ್‍ಪೆÇಳೆ ನದಿ ತುಂಬಿ ಹರಿಯುತ್ತಿದ್ದು, ಈ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವದರಿಂದ ಈ ನದಿಯಲ್ಲಿ ರ್ಯಾಫ್ಟಿಂಗ್ ಕ್ರೀಡೆಯನ್ನು ಸ್ಥಗಿತಗೊಳಿಸಲಾಗಿದೆ. -ಹರೀಶ್ ಮಾದಪ್ಪ