ಶ್ರೀಮಂಗಲ, ಆ. 7: ನಿರಂತರವಾಗಿ ಧಾರಕಾರ ಮಳೆ ಸುರಿಯುತ್ತಿರುವದರಿಂದ ದಕ್ಷಿಣ ಕೊಡಗಿನ ಮೂಲಕ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಅಂತರ್‍ರಾಜ್ಯ ಪೆÇನ್ನಂಪೇಟೆ-ಕುಟ್ಟ ಹೆದ್ದಾರಿ ನಡುವೆ ಹುದಿಕೇರಿಯ 7ನೇ ಮೈಲಿನಲ್ಲಿ ಹೆದ್ದಾರಿಯಲ್ಲಿ ಭೂಕುಸಿತಕ್ಕೆ ಉಂಟಾಗುವ ಆತಂಕ ಎದುರಾಗಿದೆ.

ಒಂದು ತಿಂಗಳ ಹಿಂದೆ ತೀವ್ರ ಮಳೆಯಿಂದ ಇಲ್ಲಿ ಬಿರುಕು ಕಾಣಿಸಿಕೊಂಡು ಮಣ್ಣು ಕುಸಿದಿತ್ತು. ಲೋಕೋಪಯೋಗಿ ಇಲಾಖೆ ಈ ಬಿರುಕನ್ನು ಮುಚ್ಚಿ ಮಣ್ಣು ಮತ್ತಷ್ಟು ಜಾರದಂತೆ ಚೀಲಗಳನ್ನು ತಡೆಯಾಗಿ ಹಾಕಿದ್ದರು. ಇದೀಗ ಮತ್ತೆ ಧಾರಕಾರ ಮಳೆಯಾಗುತ್ತಿರುವದರಿಂದ ಈ ಸ್ಥಳದಲ್ಲಿ ಬಿರುಕು ಕಾಣಿಕೊಂಡಿದ್ದು, ಹೆದ್ದಾರಿ ಬದಿಯ ಮಣ್ಣು ಜಾರುತ್ತಿದೆ.

ಕೇರಳ ರಾಜ್ಯಕ್ಕೆ ಸಂಪರ್ಕಿಸುವ ಮಾಕುಟ್ಟ ರಸ್ತೆ ಭೂಕುಸಿತದಿಂದ ಸಂಪರ್ಕ ಕಡಿತವಾಗಿದ್ದು, ಇದೀಗ ಕುಟ್ಟ - ಪೆÇನ್ನಂಪೇಟೆ ಮಾರ್ಗದ ಈ ಹೆದ್ದಾರಿಯಲ್ಲಿಯೇ ಕೇರಳದ ಭಾರಿ ವಾಹನಗಳು ಸೇರಿದಂತೆ ಹೆಚ್ಚಿನ ವಾಹನಗಳು ಸಂಚರಿಸುತ್ತಿವೆ.

ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಸಣ್ಣುವಂಡ ನವೀನ್ ಅವರು ಆಗಮಿಸಿ ಪರಿಶೀಲಿಸಿದ್ದು, ಮತ್ತಷ್ಟು ಮಣ್ಣು ಜಾರದಂತೆ ಮತ್ತು ಹೆದ್ದಾರಿಗೆ ಹಾನಿಯಾಗದಂತೆ ಮಣ್ಣು ತುಂಬಿದ ಚೀಲಗಳನ್ನು ತಡೆಯಾಗಿ ಹಾಕಿಸಿದ್ದಾರೆ. ಅಲ್ಲದೇ ರಸ್ತೆ ಬದಿಯಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಕಳೆದ ಮಳೆಗಾಲದಲ್ಲಿ ಇದೇ ಸ್ಥಳದಲ್ಲಿ ಹೆದ್ದಾರಿಯ ಒಂದು ಬದಿ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿಗೆ ಸಿಮೆಂಟ್ ತಡೆಗೋಡೆಯನ್ನು ನಿರ್ಮಿಸಲಾಗಿದ್ದರೂ, ತಡೆಗೋಡೆಯ ಒಂದು ಬದಿಯಲ್ಲಿ ಮತ್ತೆ ಹೆದ್ದಾರಿಯ ಒಂದು ಬದಿ ಕುಸಿಯುತ್ತಿದೆ.

ಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಬೇಗೂರು ಗ್ರಾಮದಲ್ಲಿ ನೂರಾರು ಎಕರೆ ಭತ್ತದ ಗದ್ದೆ ಜಲಾವೃತವಾಗಿದ್ದು, ಇಲ್ಲಿನ ಬೇಗೂರು ಕೊಲ್ಲಿಯಲ್ಲಿ ಸುಮಾರು 4 ಅಡಿಯಷ್ಟು ನೀರು ನಿಂತಿದ್ದು, ಸಮುದ್ರದಂತೆ ಕಾಣುತ್ತಿದೆ.