ಪೊನ್ನಂಪೇಟೆ : ದಿನವಿಡೀ ಎಡೆಬಿಡದೆ ಸುರಿದ ಮಳೆಯಿಂದಾಗಿ ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಸಂಚಾರಕ್ಕೆ ತೊಡಕುಂಟಾಗಿತ್ತು. ಕೃಷಿ ಭೂಮಿಗಳು ಜಲಾವೃತಗೊಂಡು ಕೃಷಿಕರು ಕಂಗಲಾಗಿದ್ದಾರೆ.

ಪೊನ್ನಂಪೇಟೆಯಿಂದ ಕುಂದಕ್ಕೆ ತೆರಳುವ ನಿನಾದ ಶಾಲೆ ಎದುರು ಮುಖ್ಯರಸ್ತೆಯಲ್ಲಿ ತೋಡು ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ದ್ವಿಚಕ್ರ, ಆಟೋ ಸಂಚಾರಕ್ಕೆ ತೊಡಕುಂಟಾಗಿದೆ. ಸುಮಾರು 2 ಅಡಿಗಳಷ್ಟು ನೀರು ನಿಂತು ಜನರು ಅತ್ತ ತೆರಳಲಾರದೆ ತೊಂದರೆ ಅನುಭವಿಸಿದರು. ರಸ್ತೆಯ ಎರಡು ಬದಿಗಳ ಗದ್ದೆ ಜಲಾವೃತಗೊಂಡಿದೆ. ದಿನದಿಂದ ದಿನಕ್ಕೆ ನೀರಿನ ಹರಿವು ಹೆಚ್ಚಾಗುತ್ತಿದ್ದು, ಮತ್ತಷ್ಟು ಆತಂಕ ಮೂಡಿಸಿದೆ. ಸಂಪರ್ಕ ರಸ್ತೆ ಸಂಪೂರ್ಣ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಿದೆ. ಬೇಗೂರುಕೊಲ್ಲಿ ಎಂಬಲ್ಲಿ ಗದ್ದೆಗಳು ಜಲಾವೃತಗೊಂಡಿವೆ. ತೂಚಮಕೇರಿ ಚಿಕ್ಕಮಂಡೂರು ಗ್ರಾಮಗಳಲ್ಲಿನ ನಾಟಿ ಕಾರ್ಯ ಸ್ಥಗಿತಗೊಂಡಿದೆ. ದಿನವಿಡೀ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಪಟ್ಟಣಕ್ಕೆ ಬರಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದು, ವಿದ್ಯುತ್ ಕೂಡ ಕಡಿತಗೊಂಡಿದೆ. 4 ದಿನಗಳಿಂದ ಈ ವ್ಯಾಪ್ತಿಯಲ್ಲಿ ನಿರಂತರ ಧಾರಾಕಾರ ಮಳೆ ಜನರನ್ನು ಬೆಚ್ಚಿ ಬೀಳಿಸಿದೆ. -ಚನ್ನನಾಯಕ