ಗೋಣಿಕೊಪ್ಪಲು, ಆ. 7: ವಿಪರೀತ ಮಳೆ ಸುರಿದ ಹಿನ್ನೆಲೆ ಗೋಣಿಕೊಪ್ಪಲುವಿನ ಕೀರೆಹೊಳೆ ಬದಿಯಲ್ಲಿರುವ ಕೆಲವು ಮನೆಗಳಿಗೆ ನೀರು ನುಗ್ಗಿದೆ.ಮನೆಯಲ್ಲಿ ವಾಸವಿರುವ ಜನರು ಸಮೀಪದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ರಾತ್ರಿ ವೇಳೆಯಲ್ಲಿ ಇನ್ನಷ್ಟು ಮಳೆ ಸುರಿಯುವ ಲಕ್ಷಣ ಕಂಡುಬಂದಿದ್ದು ಮತ್ತಷ್ಟು ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಹೆಚ್ಚಾಗಿದೆ. ಪೊನ್ನಂಪೇಟೆ ನಾಡು ಕಚೇರಿಯ ಆರ್.ಐ. ರಾಧಕೃಷ್ಣ ಹಾಗೂ ಸಿಬ್ಬಂದಿಗಳು ಗಂಜಿ ಕೇಂದ್ರದ ಉಸ್ತುವಾರಿ ವಹಿಸಿದ್ದು, ಸಂತ್ರಸ್ತರಿಗೆ ಊಟದ ವ್ಯವಸ್ಥೆ, ಉಳಿದು ಕೊಳ್ಳಲು ಸೌಕರ್ಯ ಒದಗಿಸಿದ್ದಾರೆ. ಕೆಲವು ಮನೆಯವರು ಬಂಧುಗಳ ಮನೆಯಲ್ಲಿ ಆಶ್ರಯ ಪಡೆದಿದ್ದು ಬೆಳಿಗ್ಗೆ ಪರಿಹಾರ ಕೇಂದ್ರಕ್ಕೆ ಆಗಮಿಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. - ಹೆಚ್.ಕೆ. ಜಗದೀಶ್