ಶ್ರೀಮಂಗಲ, ಆ. 7: ದಕ್ಷಿಣ ಕೊಡಗಿನಲ್ಲಿ ಸುರಿಯುತ್ತಿರುವ ಧಾರಕಾರ ಮಳೆಗೆ ರಸ್ತೆ ಸಂಪರ್ಕ ಅಲ್ಲಲ್ಲಿ ಕಡಿತವಾಗಿದೆ. ಶ್ರೀಮಂಗಲ - ನಾಲ್ಕೇರಿ, ಟಿ. ಶೆಟ್ಟಿಗೇರಿ - ಬಲ್ಯಮಂಡೂರು, ಹೈಸೊಡ್ಲೂರು ಮೂಲಕ ಬಿರುನಾಣಿ - ಹುದಿಕೇರಿ, ಬಿ. ಶೆಟ್ಟಿಗೇರಿ- ಕೈಮುಡಿಕೆ ರಸ್ತೆ, ಬಿರುನಾಣಿಯಿಂದ ನ್‍ಟ್‍ಕುಂದ್‍ಗೆ ಸಂಪರ್ಕ ಕಡಿತವಾಗಿದೆ.

ಶ್ರೀಮಂಗಲ - ನಾಲ್ಕೇರಿ ನಡುವೆ ಲಕ್ಷಣ ತೀರ್ಥ ನದಿ ನೀರು ಸೇತುವೆ ಮೇಲೆ ಸುಮಾರು 4 ಅಡಿ ಎತ್ತರ ಹರಿಯುತ್ತಿದೆ. ಟಿ. ಶೆಟ್ಟಿಗೇರಿಯಿಂದ ಬಲ್ಯಮಂಡೂರು ನಡುವೆಯೂ ಈ ನದಿಯ ನೀರು ರಸ್ತೆಯ ಮೇಲೆಯೂ ಹರಿಯುತ್ತಿರುವದರಿಂದ ಸಂಚಾರ ಕಡಿತವಾಗಿದೆ. ಬಿರುನಾಣಿಯಿಂದ ನ್‍ಟ್‍ಕುಂದ್‍ಗೆ ತೆರಳುವ ಮಾರ್ಗದಲ್ಲಿ ನ್‍ಟ್‍ಕುಂದ್ ನದಿಯ ನೀರು ಸೇತುವೆ ಮೇಲೆ ಹರಿಯುತ್ತಿರುವದರಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಪೆÇನ್ನಂಪೇಟೆಯಿಂದ ಬಿ. ಶೆಟ್ಟಿಗೇರಿ ಮಾರ್ಗದ ನಡುವೆ ಕೈಮುಡಿಕೆ ನದಿ ನೀರಿನಿಂದ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ಬಂದ್ ಆಗಿದೆ.

ಬಿರುನಾಣಿಯಿಂದ 3 ಕಿ.ಮೀ ದೂರದಲ್ಲಿರುವ ಮತ್ತು ಬ್ರಹ್ಮಗಿರಿ ತಪ್ಪಲಿನಲ್ಲಿರುವ ನ್‍ಟ್‍ಕುಂದ್ ಪ್ರದೇಶದ ನದಿ ಉಕ್ಕಿ ಹರಿಯುತ್ತಿರುವದರಿಂದ ಹೊರ ಜಗತ್ತಿನ ಸಂಪರ್ಕ ಕಡಿತವಾಗಿದೆ. ನ್‍ಟ್‍ಕುಂದ್ ಇದೀಗ ದ್ವೀಪದಂತಿದ್ದು, ತೂಗುಪಾಲದ ಮೂಲಕ ಸಹ ಸಾಗಲು ಸಾಧ್ಯವಾಗುವದಿಲ್ಲ. ತೂಗು ಪಾಲದ ಎರಡು ಕಡೆ ನದಿ ನೀರು ಏರಿಕೆಯಾಗಿರುವದರಿಂದ ತೂಗುಪಾಲದಲ್ಲಿ ತೆರಳಲು ಜನರಿಗೆ ಸಾಧ್ಯವಾಗುತ್ತಿಲ್ಲ.

ನ್‍ಟ್‍ಕುಂದ್‍ಗೆ ಕಳೆದ 24 ಗಂಟೆಯಲ್ಲಿ 13 ಇಂಚು ಮಳೆಯಾಗಿದ್ದು, ಪ್ರಸಕ್ತ ವರ್ಷ 130 ಇಂಚು ಮಳೆಯಾಗಿದೆ ಎಂದು ಇಲ್ಲಿನ ನಿವಾಸಿ ಕರ್ತಮಾಡ ಧನು ಅವರು ಮಾಹಿತಿ ನೀಡಿದ್ದಾರೆ.

ಹರೀಶ್ ಮಾದಪ್ಪ