ಸೋಮವಾರಪೇಟೆ, ಆ.6: ಕೊರಿಯರ್‍ನಲ್ಲಿ ಬಂದ ‘ತೀರ್ಥ’ದ ಹೆಸರಿನ ದ್ರಾವಣ ಸೇವಿಸಿ ಸಾವನ್ನಪ್ಪಿದ ತಣ್ಣೀರುಹಳ್ಳ ಗ್ರಾಮದ ಸುರೇಶ್ ಅವರ ಸಾವಿನ ರಹಸ್ಯ ಭೇದಿಸಲು ಸೋಮವಾರಪೇಟೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಕಾಸರಗೋಡಿನ ದೇವಾಲಯವೊಂದರ ವಿಳಾಸದಿಂದ ಸೋಮವಾರಪೇಟೆಯ ಕಣಾರ ಹೊಟೇಲ್‍ಗೆ ‘ತೀರ್ಥ’ವನ್ನು ಕೊರಿಯರ್ ಮಾಡಿದ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆಹಾಕಿರುವ ಪೊಲೀಸರು, ಘಟನೆಯನ್ನು ವಿವಿಧ ಆಯಾಮಗಳ ಮೂಲಕ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಕಣಾರ ಹೊಟೇಲ್‍ನಲ್ಲಿರುವ ಸಿ.ಸಿ. ಕ್ಯಾಮೆರಾದ ದೃಶ್ಯಾವಳಿಗಳಲ್ಲಿ, ಕೊರಿಯರ್ ಅಂಗಡಿಯ ವ್ಯಕ್ತಿ ಪಾರ್ಸಲ್ ತಂದು ನೀಡಿರುವದು, ಅದನ್ನು ಹೊಟೇಲ್‍ನ ಮಾಲೀಕರು ಸ್ವೀಕರಿಸಿರುವದು, ಮಾರನೇ ದಿನ ಹೊಟೇಲ್‍ನ ಮಾಲೀಕರು, ಸುರೇಶ್ ಅವರಿಗೆ ನೀಡಿರುವದು ದಾಖಲಾಗಿದ್ದು, ಇವುಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದರೊಂದಿಗೆ ಯಾವ ಕೊರಿಯರ್ ಕಚೇರಿಯಿಂದ ಸೋಮವಾರಪೇಟೆಯ ಕೊರಿಯರ್ ಕಚೇರಿಗೆ ಪಾರ್ಸಲ್ ಬಂದಿದೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗಿದ್ದು, ಆ ಕಚೇರಿಯ ಸಿ.ಸಿ. ಕ್ಯಾಮೆರಾದ ದೃಶ್ಯಾವಳಿಯನ್ನು ಸಂಗ್ರಹಿಸಲಾಗುತ್ತಿದೆ. ಒಟ್ಟಾರೆ ಪ್ರಕರಣದ ಮೂಲದಿಂದಲೇ ಸಮಗ್ರ ಮಾಹಿತಿ ಕಲೆಹಾಕಲು ಪೊಲೀಸರು ಶ್ರಮಿಸುತ್ತಿದ್ದಾರೆ ಎನ್ನಲಾಗಿದೆ.
ಪಾರ್ಸೆಲ್‍ನಲ್ಲಿ ಬಂತೇ ಸೈನೈಡ್?: ಸುರೇಶ್ ಅವರು ತೀರ್ಥದ ಹೆಸರಿನಲ್ಲಿ ಸೇವಿಸಿದ ದ್ರಾವಣ ಸೈನೈಡ್ ಆಗಿರಬಹುದು ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಸೇವಿಸಿದ ಕೆಲ ಕ್ಷಣಗಳಲ್ಲೇ ಪ್ರಾಣ ತೆಗೆಯುವ ಅಪಾಯಕಾರಿ ಸೈನೈಡ್‍ನ್ನು ತೀರ್ಥದ ಹೆಸರಿನಲ್ಲಿ ಸುರೇಶ್ ಅವರಿಗೆ ಕಳುಹಿಸಿದವರು ಯಾರು? ಎಂಬ ಬಗ್ಗೆ ತನಿಖೆ ಚುರುಕುಗೊಂಡಿದೆ ಎಂದು ತಿಳಿದುಬಂದಿದೆ.
ಅನೈತಿಕ ಸಂಬಂಧದ ವಿಚಾರಕ್ಕೆ ಸಂಬಂಧಿಸಿದಂತೆ ಸುರೇಶ್ ಅವರನ್ನು ಕುತಂತ್ರದ ಮೂಲಕ ಸಾವನ್ನಪ್ಪುವಂತೆ ಮಾಡಿರುವದು ಮೇಲ್ನೋಟಕ್ಕೆ ತಿಳಿದುಬಂದಿದೆ. ಯಾರು-ಯಾರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು? ಸಾವಿನ ಹಿಂದೆ ಯಾರಿದ್ದಾರೆ? ಕೊರಿಯರ್‍ನಲ್ಲಿ ಸುರೇಶ್ ಅವರಿಗೆ ‘ಸಾವು’ಕಳುಹಿಸಿದ ವ್ಯಕ್ತಿ ಯಾರು? ಎಂಬ ಬಗ್ಗೆ ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.
ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಅವರನ್ನು ಸಂಪರ್ಕಿಸಿದ ಸಂದರ್ಭ ‘ಪ್ರಕರಣದ ತನಿಖೆ ನಡೆಯುತ್ತಿದೆ;ಒಂದೆರಡು ದಿನದಲ್ಲಿ ಸಮಗ್ರ ಚಿತ್ರಣ ತಿಳಿಯಲಿದೆ’ ಎಂದಷ್ಟೇ ಮಾಹಿತಿ ನೀಡಿದ್ದಾರೆ.