ವೀರಾಜಪೇಟೆ, ಆ. 6: ಮಾರ್ಡನ್ ಜನರೇಶನ್ ಪ್ಯಾಕೇಟ್ ಫುಡ್‍ನ ಮೊರೆ ಹೋಗಿದೆ. ನ್ಯೂ ಜನರೇಶನ್ ನಾವು ತಿನ್ನುವ ಆಹಾರ ಗಿಡದಲ್ಲಿ ಬೆಳೆಯುತ್ತೋ ಅಥವಾ ಪ್ಯಾಕ್ಟರಿಯಲ್ಲಿ ತಯಾರಾಗುತ್ತೋ ಅನ್ನೋದು ಗೊತ್ತಾಗದ ಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ಪೀಳಿಗೆಗೆ ಕೃಷಿ, ಆಹಾರ, ಮಣ್ಣಿನ ಸೊಗಡನ್ನು ತಿಳಿಸುವದಕ್ಕಾಗಿಯೇ ಇಲ್ಲೊಂದು ಶಾಲೆ ವಿನೂತನ ಪ್ರಯೋಗ ಕಳೆದ ಹತ್ತು ವರ್ಷಗಳಿಂದ ಮಾಡುತ್ತಲೇ ಬಂದಿದೆ. ಈ ಕುರಿತು ಒಂದು ಚಿತ್ರಣ ಇಲ್ಲಿದೆ.
ಈ ಮಕ್ಕಳೆಲ್ಲಾ ಅರಮೇರಿಯ ಎಸ್.ಎಂ.ಎಸ್. ಅಕಾಡೆಮಿ ಆಫ್ ಸೆಂಟ್ರಲ್ ಎಜುಕೇಷನ್‍ನ ವಿದ್ಯಾರ್ಥಿ ಗಳು. ಇವರು ಪಾಠ ಕಲಿಯೋಕೆ ಅಂತಾನೇ ಹೊರಟಿರುವದು ಆದ್ರೆ ತರಗತಿಯ ಪುಸ್ತಕದ ಪಾಠವಲ್ಲ ಬದಲಾಗಿ ಜೀವನಕ್ಕೆ ಉಸಿರಾಗಬಲ್ಲ ಕೃಷಿ ಪಾಠಕ್ಕೆ. ಕೈಕೆಸರಾದರೆ ಬಾಯಿ ಮೊಸರು ಎನ್ನುವ ಗಾದೆಯ ತಾತ್ಪರ್ಯವನ್ನು ತಿಳಿಯುವದಕ್ಕೆ ಇವರ ಗುರುಗಳು ಅವಕಾಶ ಮಾಡಿಕೊಟ್ರು. ಉಳುಮೆ ಮಾಡಿಸಿ, ಗದ್ದೆಗೆ ಇಳಿಸಿ ಭತ್ತ ನಾಟಿ ಮಾಡೋ ಪಾಠ ಹೇಳಿಕೊಟ್ರು. ಕೆಸರಿನಲ್ಲಿ ಆಡೋ ಜೊತೆಗೆ ಭತ್ತದ ಸಸಿಗಳನ್ನು ನಾಟಿ ಮಾಡುವದನ್ನು ಶಿಕ್ಷಕರಿಂದ ಕಲಿತರು. ಸುರಿಯುವ ಮಳೆಯನ್ನು ಲೆಕ್ಕಿಸದೇ ಗದ್ದೆಗೆ ಇಳಿದ ಮಕ್ಕಳು ಕೆಸರು ಗದ್ದೆಯಲ್ಲಿ ಹಗ್ಗ ಜಗ್ಗಾಟ, ಓಟ, ಕೆಸರೆರೆಚಾಟ ಕ್ರೀಡೆಯಲ್ಲಿ ತೊಡಗಿಸಿಕೊಂಡು ಸಂಭ್ರಮಿಸಿದರು.
ಕಾಲು ಹೂತು ಹೋಗುತ್ತಿದ್ದರೂ ಮಕ್ಕಳು ಹೆಣಗಾಡಿ ಆಟವಾಡಿದರು. ಮಕ್ಕಳ ಜೊತೆಗೆ ಶಿಕ್ಷಕರು ಕೂಡಾ ಮಕ್ಕಳ ಜೊತೆಗೆ ಬೆರೆತು ಆಟೋಟದಲ್ಲಿ ತೊಡಗಿಸಿಕೊಂಡರು.
ಈ ಗ್ರಾಮೀಣ ಕ್ರೀಡೋತ್ಸವ ದೇಶಿಯ ಗ್ರಾಮೀಣ ಕ್ರೀಡೆಯ ನೆನಪನ್ನು ತಂದಿತ್ತು. ಪುಟಾಣಿ ಮಕ್ಕಳು ಕೆಸರು ಗದ್ದೆಯ ಕ್ರೀಡಾಕೂಟದಲ್ಲಿ ಸೋಲು ಗೆಲವೆನ್ನದೇ ಮೈಮರೆತು ಆಟವಾಡಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.
ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ನಡೆದ ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ, ಥ್ರೋಬಾಲ್, ವಾಲಿಬಾಲ್ ಮುಂತಾದ ಕ್ರೀಡೆಗಳು ಹಳೆಯ ಕಾಲದ ದೇಶಿಯ ಗ್ರಾಮೀಣ ಕ್ರೀಡೆಯ ನೆನಪನ್ನು ತಂದವು. ಅಂದು ಹಬ್ಬ ಹರಿದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ನಡೆಯುವ ಇಂತಹ ಕ್ರೀಡಾ ಕೂಟದಂತೆ ಈ ಕ್ರೀಡೋತ್ಸವ ಮೆರಗುತಂದಿದ್ದು ನೋಡಲು ಪುಳಕವಾಗಿತ್ತು. ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಕ್ರೀಡಾ ಕೂಟದಲ್ಲಿ ಹಬ್ಬದ ವಾತಾವರಣ ನಿರ್ಮಿಸಿದ್ದು ವಿಶೇಷವಾಗಿತ್ತು. ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳ ವಿವಿಧ ಗುಂಪುಗಳ ನಡುವೆ ಕೆಸರು ಗದ್ದೆ ಕ್ರೀಡಾಕೂಟ ನಡೆಯಿತು.
ವಿದ್ಯಾರ್ಥಿಗಳ ಪಾಲಿಗೆ ಈ ಆಟಗಳು ರೋಮಾಂಚಕವಾಗಿತ್ತು. ಕೆಸರುಗದ್ದೆ ಆಟ ಎಂದಾಕ್ಷಣ ನಮಗೆ ನೆನಪಾಗುವದು ಕರಾವಳಿ ಮತ್ತು ಮಲೆನಾಡು. ಈ ಪ್ರದೇಶದ ಮಣ್ಣಿನ ಮಕ್ಕಳೆಲ್ಲರೂ ಒಂದಾಗಿ ಪಾಲ್ಗೊಳ್ಳುವ ಈ ಕೆಸರುಗದ್ದೆ ಆಟ ಗ್ರಾಮೀಣ ಜನರ ನೆಚ್ಚಿನ ಕ್ರೀಡೆಯಾಗಿದೆ. ಇಡೀ ವರ್ಷ ಕ್ರೀಡಾಕೂಟಗಳು ನಡೆದರೂ, ಮಳೆಗಾಲದಲ್ಲಿ ನಡೆಯುವ ಕೆಸರುಗದ್ದೆ ಕ್ರೀಡಾಕೂಟ ಜನಪ್ರಿಯ. ಬಿರುಸಿನ ಕೃಷಿ ಕಾರ್ಯದ ನಡುವೆಯೂ ಕ್ರೀಡಾ ಪಟುಗಳು ಕೆಸರುಗದ್ದೆ ಆಟದ ಜನರಿಗೆ ಮೂಲಕ ಜನರಿಗೆ ಮನರಂಜನೆ ನೀಡುತ್ತಾರೆ. ಸುರಿಯುವ ತುಂತುರು ಮಳೆಯಲ್ಲಿ ಮೊಣಕಾಲುದ್ದದ ಕೆಸರಿನಲ್ಲಿ ವಿದ್ಯಾರ್ಥಿಗಳ ತಂಡಗಳ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಸೆಣಸಾಟದ ದೃಶ್ಯ ರೋಮಾಂಚನವನ್ನುಂಟು ಮಾಡಿತ್ತು. ಇನ್ನೂ ಕೆಸರಿನಲ್ಲಿ ಕಾಲೂರಲಾರದೇ ಚಿಮ್ಮಿ ಬಂದ ವಾಲಿಬಾಲನ್ನು ಒದ್ದು ಬಿದ್ದು ಗೆಲವಿಗಾಗಿ ನಡೆಸಿದ ಕಸರತ್ತು ಇನ್ನಷ್ಟು ವಿದ್ಯಾರ್ಥಿಗಳಿಗೆ ಖುಷಿ ನೀಡಿತ್ತು.
ಈ ವೇಳೆ ಸ್ಪರ್ಧಾಳುಗಳು ಜಯಗಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ, ಅದಕ್ಕೆ ಮಕ್ಕಳು ಚಪ್ಪಾಳೆ, ಶಿಳ್ಳೆಯ ಮೂಲಕ ಮತ್ತಷ್ಟು ಪುಷ್ಟಿ ನೀಡಿದರು.
ಒಬ್ಬರಿಗೊಬ್ಬರು ಕೆಸರೆರಚಿ ಕೊಂಡು, ಮೈಗೆಲ್ಲಾ ಮಣ್ಣು ಮೆತ್ತಿಕೊಂಡು ಇಡೀ ದಿನ ಕೆಸರಿನೊಳಗೆ ಗೆಲವಿಗಾಗಿ ಕಸರತ್ತು, ನಡೆಸಿದರಲ್ಲದೆ ಉತ್ಸಾಹ, ಹುಮ್ಮಸ್ಸುಗಳೆಲ್ಲವೂ ಗ್ರಾಮೀಣ ಕ್ರೀಡೆಗಳ ಗತವೈಭವವನ್ನು ಸಾರುತ್ತಿತ್ತು. ಅಲ್ಲದೆ ಜೀವನದ ಜಂಜಾಟವನ್ನು ಮರೆತು ನಿಸರ್ಗದ ರಮಣೀಯ ತಾಣದ ಕೆಸರುಗದ್ದೆಯಲ್ಲಿ ನಡೆದ ಕ್ರೀಡೆಗಳು ಪುಟಾಣಿ ಮಕ್ಕಳಿಗೆ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಆನಂದವ ನ್ನುಂಟು ಮಾಡಿತ್ತು. ಒಟ್ಟಿನಲ್ಲಿ ಭತ್ತದ ನಾಟಿ ಪ್ರಾತ್ಯಕ್ಷಿತೆಯೂ ಒಂದಿಷ್ಟು ಮಕ್ಕಳಿಗೆ ದೇಶದ ಬೆನ್ನೆಲುಬು ಅನ್ನದಾತ ರೈತನ ಬೆವರಿನ ಬೆಲೆ ಏನು ಎಂಬ ಪಾಠವನ್ನು ತಿಳಿ ಹೇಳಿದ್ದು ಮಾತ್ರ ಸುಳ್ಳಲ್ಲ. ಪ್ರತಿ ಶಾಲೆಯ ಮಕ್ಕಳಿಗೂ ಪಠ್ಯದ ಜೊತೆಗೆ ಇಂತಹ ವಿನೂತನ ಪಾಠ ದೊರೆತರೆ ಕೃಷಿಯ ಬಗ್ಗೆ ಮುಂದಿನ ಪೀಳಿಗೆಗೂ ಆಸಕ್ತಿಯ ಕ್ಷೇತ್ರವಾಗಿ ಉಳಿಯಬಹುದು.
ಶಾಲೆಯ ಪ್ರಾಂಶುಪಾಲೆ ಕುಸುಮ್ ಕೆ.ಪಿ., ಆಡಳಿತಾಧಿಕಾರಿಗಳು, ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಈ ಕ್ರೀಡಾಕೂಟ ಜರುಗಿತು.
- ರಜಿತ ಕಾರ್ಯಪ್ಪ