ಗೋಣಿಕೊಪ್ಪಲು, ಆ.6: ದೇವರಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇವಮಚ್ಚಿ ಅಕ್ಕೆಮಾಳ ಬಳಿ ಪೀಟರ್ ಎಂಬವರ ಮನೆಗೆ ಇಂದು ಮುಂಜಾನೆ ವೇಳೆ ಈ ಒಂಟಿ ಸಲಗವೊಂದು ಧಾಳಿ ನಡೆಸಿದ್ದು ಮನೆಯ ಮುಂದಿದ್ದ ದೊಡ್ಡ ಗಾತ್ರದ ತೆಂಗಿನ ಮರವನ್ನು ಉರುಳಿಸಿದೆ.

ತೆಂಗಿನ ಮರವು ಉರುಳಿದ ಪರಿಣಾಮ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾ ಹಾಗೂ ಮನೆಯ ಒಂದು ಬದಿ ತೀವ್ರ ಜಖಂಗೊಂಡಿದೆ ಮನೆಯವರು ಬೊಬ್ಬೆ ಹಾಕಿದ ಪರಿಣಾಮ ಸಮೀಪದ ಅರಣ್ಯಕ್ಕೆ ಒಂಟಿ ಸಲಗ ತೆರಳಿದೆ.

ಪ್ರತಿ ನಿತ್ಯ ಹಗಲಿನ ವೇಳೆಯಲ್ಲಿಯೇ ಈ ಒಂಟಿ ಸಲಗವು ಜನ ಓಡಾಡುತ್ತಿರುವ ಅರಣ್ಯ ಬದಿಯಲ್ಲಿಯೇ ನಿಂತು ಸಾರ್ವಜನಿಕರನ್ನು ಗಾಬರಿಗೊಳಿಸು ತ್ತಿದೆ. ಇತ್ತೀಚೆಗೆ ಇದೇ ಗ್ರಾಮದ ದಿವ್ಯ ಧರ್ಮಜ ಎಂಬವರ ಮನೆಯ ಕೊಟ್ಟಿಗೆಯ ಮೇಲೆ ಧಾಳಿ ನಡೆಸಿ ನಷ್ಟ ಪಡಿಸಿತ್ತು. ಈ ಒಂಟಿ ಸಲಗವು ಸಮೀಪದ ಕೆರೆಯಲ್ಲಿ ಕಾಣಿಸಿ ಕೊಳ್ಳುತ್ತಿದ್ದು ಸಾರ್ವಜನಿಕರು ಪ್ರತಿ ನಿತ್ಯ ಭಯದ ವಾತವರಣದಲ್ಲಿಯೇ ದಿನ ಕಳೆಯುವಂತಾಗಿದೆ.

ಮುಂಜಾನೆ ಪೀಟರ್ ಮನೆಯ ಸಮೀಪ ಈ ಒಂಟಿ ಸಲಗವು ಕಾಣಿಸಿಕೊಂಡಾಗ ಅಲ್ಲಿದ್ದ ನಾಯಿಯೊಂದು ಆನೆಯನ್ನು ಕಂಡು ಬೊಗಳಿದ ಹಿನ್ನಲೆಯಲ್ಲಿ ಈ ಸಲಗವು ನಾಯಿಯನ್ನು ಓಡಿಸಿಕೊಂಡು ಬಂದ ರಭಸಕ್ಕೆ ಸಿಟ್ಟಿನಿಂದ ಮನೆಯ ಅಂಗಳದಲ್ಲಿದ್ದ ತೆಂಗಿನ ಮರವನ್ನು ಬೀಳಿಸುವದರೊಂದಿಗೆ ತನ್ನ ಸಿಟ್ಟನ್ನು ತೀರಿಸಿಕೊಂಡಿದೆ. ಅದೃಷ್ಟವಶಾತ್ ಮನೆಯವರು ಮನೆಯ ಒಳಗೆ ಇದ್ದದರಿಂದ ಯಾವದೇ ಅನಾಹುತವಾಗಲಿಲ್ಲ. ಮುಂಜಾನೆ ಸುದ್ದಿ ತಿಳಿದ ತಿತಿಮತಿ ಉಪಠಾಣೆಯ ಅಧಿಕಾರಿಗಳಾದ ಸುಬ್ರಮಣಿ, ಯೋಗೇಶ್, ಪೊನ್ನಂಪೇಟೆ ಠಾಣೆಯ ಠಾಣಾಧಿಕಾರಿ ಮಹೇಶ್, ತಿತಿಮತಿ ಅರಣ್ಯ ಇಲಾಖೆಯ ಆರ್.ಎಫ್.ಓ. ಅಶೋಕ್ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಮನೆಯ ಮೇಲೆ ಬಿದ್ದಿದ್ದ ತೆಂಗಿನ ಮರವನ್ನು ತೆರವುಗೊಳಿಸಿದ್ದಾರೆ. ಆಟೋರಿಕ್ಷಾಕ್ಕೆ ಜಖಂ ಆದ ಹಿನ್ನಲೆಯಲ್ಲಿ ಇಲಾಖೆ ವತಿಯಿಂದ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.

-ಹೆಚ್.ಕೆ.ಜಗದೀಶ್