ನವದೆಹಲಿ, ಆ. 5: ಜಮ್ಮು-ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಆರ್ಟಿಕಲ್ 35ಎ, 370ನ್ನು ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಜಮ್ಮು-ಕಾಶ್ಮೀರಕ್ಕೆ ಇದ್ದ ರಾಜ್ಯದ ಸ್ಥಾನಮಾನವನ್ನು ವಾಪಸ್ ಪಡೆದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಬಗ್ಗೆ ಸಂಸತ್ನಲ್ಲಿ ಘೋಷಿಸಿದ್ದು, ಜಮ್ಮು-ಕಾಶ್ಮೀರವನ್ನು ವಿಭಜನೆ ಮಾಡುವ ಐತಿಹಾಸಿಕ ನಿರ್ಣಯವನ್ನು ಘೋಷಿಸಿದರು. ರಾಜ್ಯಸಭೆಯಲ್ಲಿ ಚರ್ಚೆ-ವಿಚರ್ಚೆ, ಗದ್ದಲ ಕೋಲಾಹಲದ ಬಳಿಕ ಧ್ವನಿ ಮತದಲ್ಲಿ ಅಂಗೀಕಾರವಾದರೂ ವಿರೋಧೀ ಸದಸ್ಯರ ಆಗ್ರಹದ ಮೇರೆಗೆ ಸಭಾಧ್ಯಕ್ಷ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮತ ವಿಭಜನೆಗೆ ಅವಕಾಶ ಕಲ್ಪಿಸಿದರು. ಈ ಸಂದರ್ಭ ರಾಜ್ಯ ಸಭೆಯಲ್ಲಿ ಗೃಹ ಸಚಿವರು ಮಂಡಿಸಿದ ವಿಧೇಯಕದ ಪರವಾಗಿ 125 ಮತಗಳು ಲಭಿಸಿದರೆ ವಿರೋಧಿಸಿ 61 ಮತಗಳು ಬಿದ್ದವು. ಆಶ್ಚರ್ಯವೆಂದರೆ ಎನ್ಡಿಎ ಮಿತ್ರ ಪಕ್ಷವಾದ ಜೆಡಿಯು ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ಸಭಾತ್ಯಾಗ ನಡೆಸಿದರೆ, ಎನ್ಡಿಎಗೆ ವಿರೋಧ ಪಕ್ಷಗಳಾದ ಆಪ್, ಬಿಎಸ್.ಪಿ, ವೈಎಸ್ಆರ್ಸಿಪಿ, ತೆಲುಗು ದೇಶಂ ಪಕ್ಷಗಳು ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದವು. ಎನ್ಡಿಎ ಕೂಟದ ಎಐಎಡಿಎಂಕೆ, ಶಿರೋಮಣಿ ಅಕಾಲಿ ದಳ ಪಕ್ಷಗಳು ಬೆಂಬಲ ಸೂಚಿಸಿದವು. ಕಾಂಗ್ರೆಸ್ ನೇತೃತ್ವದಲ್ಲಿ ಎಸ್ಪಿ, ಡಿಎಂಕೆ, ಎನ್ಸಿಪಿ, ಆರ್ಜೆಡಿ ಪಕ್ಷಗಳು ಮಸೂದೆಯನ್ನು ವಿರೋಧಿಸಿದವು.
ಅತ್ತ ಅಮಿತ್ ಷಾ ತಿದ್ದುಪಡಿ ಮಸೂದೆ ಮಂಡಿಸುತ್ತಿದ್ದಂತೆಯೇ ಇತ್ತ ಕಾಂಗ್ರೆಸ್ ಮುಖಂಡ ಗುಲಾಂ ನಂಬಿ ಅಜಾದ್ ಸೇರಿದಂತೆ ಹಲವು ಪ್ರತಿಪಕ್ಷ ನಾಯಕರು ತಿದ್ದುಪಡಿ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ವಿರೋಧ ಪಕ್ಷಗಳ ಪೈಕಿ ಟಿಎಂಸಿ ಮತ್ತು ಎನ್ಸಿಪಿ ಪಕ್ಷಗಳೂ ಕೂಡ ಸಭಾತ್ಯಾಗ ನಡೆಸಿದರು.
ಜಮ್ಮು-ಕಾಶ್ಮೀರದಿಂದ ಲಡಾಕ್ ಅನ್ನು ಪ್ರತ್ಯೇಕಗೊಳಿಸಿ, ಎರಡೂ ಪ್ರದೇಶಗಳು ಇನ್ನು ಮುಂದಿನ ದಿನಗಳಲ್ಲಿ ಕೇಂದ್ರಾಡಳಿತ ಪ್ರದೇಶವಾಗಿರಲಿವೆ. ಜಮ್ಮು-ಕಾಶ್ಮೀರ ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಲಿದ್ದರೆ, ಲಡಾಕ್ ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವಾಗಿರಲಿದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370ಯನ್ನು ರದ್ದುಗೊಳಿಸಿರುವ ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರಕ್ಕೆ ದೇಶಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಂಸತ್ನಲ್ಲಿ ಈ ನಿರ್ಧಾರವನ್ನು ಗೃಹ ಸಚಿವ ಅಮಿತ್ ಶಾ ಪ್ರಕಟಿಸುತ್ತಿದ್ದಂತೆಯೇ ಕಾಂಗ್ರೆಸ್, ಪಿಡಿಪಿ ಸದಸ್ಯರು ಕೋಲಾಹಲ ಮೋದಿ ಸರ್ಕಾರಕ್ಕೆ ವಿಪಕ್ಷಗಳ ಬೆಂಬಲ ನೆರವಾಯಿತು.
ಕಾಂಗ್ರೆಸ್ ಹಾಗೂ ಪಿಡಿಪಿಯನ್ನು ಹೊರತುಪಡಿಸಿದರೆ ಬೇರೆ ಯಾವ ಪಕ್ಷಗಳೂ ಹೆಚ್ಚು ಗದ್ದಲ ಉಂಟು ಮಾಡಿಲ್ಲ. ಈ ನಡುವೆ ಬಿಎಸ್ ಪಿ ಸಂಸದ ಸತೀಶ್ ಚಂದ್ರ ಮಿಶ್ರಾ, ಆರ್ಟಿಕಲ್ 370 ರದ್ದುಗೊಳಿಸುವ ಮಸೂದೆಗೆ ತಮ್ಮ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಘೋಷಿಸಿದರು.
ಅಲ್ಲದೆ ಬಿಜೆಡಿ ಸಹ ಬೆಂಬಲ ಸೂಚಿಸಿದ್ದು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವ ನೀಡುವ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಲು ದಾರಿ ಸುಗಮವಾಯಿತು.
ರಾಜ್ಯಸಭೆಯಲ್ಲಿ ಅಮಿತ್ ಶಾ ಮಾತನಾಡುತ್ತ ಜಮ್ಮು ಮತ್ತು ಕಾಶ್ಮೀರದ ಜನತೆಯ ಅನುಕೂಲಕ್ಕಾಗಿ ಮಾಡಲಾಗಿದ್ದ ಸಂವಿಧಾನದ ಕಲಂ 370ಯಿಂದ ಕಾಶ್ಮೀರದಲ್ಲಿ ಕೇವಲ 3 ಕುಟುಂಬಗಳು ಮಾತ್ರ ಲಾಭ ಮಾಡಿಕೊಂಡಿವೆ. ಇದರಿಂದ ಜನ ಸಾಮಾನ್ಯರಿಗೆ ಯಾವದೇ ರೀತಿಯ ಲಾಭವಾಗಿಲ್ಲ ಎಂದರು.
ಕಾಶ್ಮೀರದ ಪ್ರತ್ಯೇಕತಾವಾದಿಗಳು ಮತ್ತು ರಾಜಕೀಯ ಮುಖಂಡರ ವಿರುದ್ಧ ತೀವ್ರ ಕಿಡಿಕಾರಿದರು.
ಕಾಂಗ್ರೆಸ್ ಮುಖಂಡರಾದ ಗುಲಾಂ ನಬಿ ಆಜಾದ್ ಅವರು, ಕಲಂ 370 ದೇಶದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದೆ ಎಂದುದು ಶುದ್ಧ ಸುಳ್ಳು ಎಂದು ಅಮಿತ್ ಶಾ, ಮಹಾರಾಜ ಹರಿ ಸಿಂಗ್ ಅವರು 1947ರ ಅಕ್ಟೋಬರ್ 27ರಂದು ಜಮ್ಮು ಮತ್ತು ಕಾಶ್ಮೀರ “ಇನ್ಸ್ಟ್ರುಮೆಂಟ್ ಆಫ್ ಆಕ್ಸೆಷನ್” ಕಾಯ್ದೆಗೆ ಸಹಿ ಮಾಡಿದ್ದರು. ಆದರೆ 1954ರಲ್ಲಿ ಕಲಂ 370 ಜಾರಿ ಯಾಗಿದ್ದು, ಕಾಂಗ್ರೆಸ್ ಮುಖಂಡರು ಸುಳ್ಳಿನ ಮೂಲಕ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ
(ಮೊದಲ ಪುಟದಿಂದ) ಕಲಂ 370ಯನ್ನು ಜೀವಂತವಾಗಿಟ್ಟಿದ್ದರು ಎಂದು ಕಿಡಿಕಾರಿದರು.
ಅಂತೆಯೇ ಇಂದು ವಿರೋಧ ಮಾಡುತ್ತಿರುವ ಕಾಂಗ್ರೆಸ್ ಸದಸ್ಯರು ಈ ಹಿಂದೆ ಅಂದರೆ 1952 ಮತ್ತು 1962ರಲ್ಲಿ ಕಲಂ 370ಗೆ ತಿದ್ದುಪಡಿ ತರಲು ಮುಂದಾಗಿದ್ದರು. ಈಗ ಏಕೆ ಅವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಹೇಳಿದರು.
ಸಂವಿಧಾನ ಪ್ರತಿಯನ್ನು ಹರಿದರು
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ಮತ್ತು ವಿಶೇಷ ಸ್ಥಾನಮಾನ ಕೊಡುತ್ತಿದ್ದ ಸಂವಿಧಾನದ 370 ಮತ್ತು 35ಎ ಪರಿಚ್ಛೇದವನ್ನು ಸುಗ್ರೀವಾಜ್ಞೆ ಮೂಲಕ ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿ ರಾಜ್ಯಸಭೆಯಲ್ಲಿಂದು ಪಿಡಿಪಿ ಸಂಸದರಾದ ಮೀರ್ ಮೊಹಮದ್ ಫಯಾಜ್ ಮತ್ತು ನಿಜರ್ ಅಹಮದ್ ಲಾವೆ ಸಂವಿಧಾನದ ಪ್ರತಿಯನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸುವ ವೇಳೆ ಫಯಾಜ್ ತಾವು ತೊಟ್ಟಿದ್ದ ಬಟ್ಟೆಯನ್ನು ಹರಿದುಕೊಂಡು ಪ್ರತಿಭಟಿಸಿದರು. ಈ ವೇಳೆ ಸಭಾಪತಿ ವೆಂಕಯ್ಯ ನಾಯ್ಡು ಈ ಪಿಡಿಪಿ ಸಂಸದರನ್ನು ಮಾರ್ಷಲ್ಗಳ ಸಹಾಯದಿಂದ ಸದನದಿಂದ ಹೊರಗೆ ಕಳುಹಿಸಿದರು. ಈ ವೇಳೆ ಇಂತಹ ವರ್ತನೆಯನ್ನು ಸಹಿಸುವದಿಲ್ಲ ಎಂದು ಇತರ ಸದಸ್ಯರಿಗೆ ಸಭಾಪತಿ ಎಚ್ಚರಿಕೆ ನೀಡಿದರು.
ಇಂದು ವಿಧೇಯಕ ಮಂಡನೆಗೆ ಮುನ್ನ ಜಮ್ಮು ಕಾಶ್ಮೀರದಲ್ಲಿ ಮಾಜಿ ಮುಖ್ಯ ಮಂತ್ರಿಗಳಾದ ಒಮರ್ ಅಬ್ದುಲ್ಲ, ಫಾರೂಕ್ ಅಬ್ಬುಲ್ಲ ಹಾಗೂ ಮುಫ್ತಿ ಮೊಹಮದ್ ಇವರುಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಗೃಹ ಬಂಧನದಲ್ಲಿರಿಸಲಾಯಿತು. ಸುಮಾರು 50 ಸಾವಿರಕ್ಕೂ ಅಧಿಕ ಭದ್ರತಾ ಪಡೆಗಳನ್ನು ರಾಜ್ಯದಲ್ಲಿ ನಿಯೋಜಿಸಲಾಗಿತ್ತು. ಅಂತರ್ಜಾಲ, ಮೊಬೈಲ್ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿತ್ತು.
ಪಾಕಿಸ್ತಾನಕ್ಕೆ ನಡುಕ
ಸಂವಿಧಾನದ 370 ನೇ ವಿಧಿಯನ್ನು ರದ್ದು ಮಾಡಿರುವ ಭಾರತದ ನಿರ್ಧಾರ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದ್ದು, ಮಂಗಳವಾರದಂದು ಪಾಕಿಸ್ತಾನದ ಸೇನಾ ಮುಖ್ಯಸ್ಥರ ತುರ್ತು ಸಭೆ ನಡೆಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈಗಾಗಲೇ ಪಾಕ್ ಸೇನಾ ಮುಖಂಡ ಜನರಲ್ ಖಾಮರ್ ಜಾವೇಸ್ ಬಾಜ್ವಾ ಸೇನಾ ಕಮಾಂಡರ್ಗಳಿಗೆ ಸೂಚನೆ ನೀಡಿದ್ದು, ಜಮ್ಮು-ಕಾಶ್ಮೀರ ವಿಷಯದ ಬಗ್ಗೆ ಚರ್ಚಿಸಲು ಮಂಗಳವಾರ ಎಲ್ಲರೂ ಸಭೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವದಕ್ಕೆ ಸಾಧ್ಯವಿಲ್ಲ. ವಿಶ್ವಸಂಸ್ಥೆಯ ಭದ್ರತಾ ಸಭೆಯ ನಿರ್ಣಯಗಳನ್ನು ಧಿಕ್ಕರಿಸಿದಂತಾಗುತ್ತದೆ. ಆದ್ದರಿಂದ ಪಾಕಿಸ್ತಾನ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತದೆ ಎಂದು ಪಾಕ್ ಸರ್ಕಾರದ ಪ್ರಕಟಣೆಯೊಂದರಲ್ಲಿ ಹೇಳಲಾಗಿದೆ. ಅಚ್ಚರಿ ಎಂದರೆ ಇದುವರೆಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈ ಕುರಿತು ಯಾವದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪಾಕಿಸ್ತಾನದಾದ್ಯಂತ ಈಗಾಗಲೇ ಭಾರತದ ನಡೆಯ ಕುರಿತು ವಿರೋಧ ವ್ಯಕ್ತವಾಗಿದ್ದು, ಪಾಕ್ ಮಾಧ್ಯಮಗಳು ಬಹಿರಂಗವಾಗಿಯೇ ಭಾರತದ ನಡೆಯನ್ನು ಖಂಡಿಸಿವೆ. “ಕಾಶ್ಮೀರಿಗಳ ಹಕ್ಕನ್ನು ಭಾರತ ಕಸಿಯುತ್ತಿದೆ” ಎಂದು ದೂರಿರುವ ಪಾಕಿಸ್ತಾನ, ಅಗತ್ಯ ಬಂದರೆ ತಾನು ತಕ್ಕ ಉತ್ತರ ನೀಡುತ್ತೇನೆ ಎಂದಿದೆ.
ಜಿಲ್ಲೆಯ ವಿವಿಧೆಡೆ ವಿಜಯೋತ್ಸವ
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ನ್ನು ರದ್ದು ಮಾಡಿದ ಮೋದಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ಮಡಿಕೇರಿ ನಗರ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಪರಸಂಘಟನೆಗಳ ಕಾರ್ಯಕರ್ತರು ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪರ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಿಜೆಪಿ ನಗರಾಧ್ಯಕ್ಷ ಮಹೇಶ್ ಜೈನಿ, ಭಜರಂಗದಳದ ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ವಿನಯ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ನರಸಿಂಹ, ಮಾಜಿ ನಗರಸಭಾ ಸದಸ್ಯರಾದ ಪಿ.ಟಿ.ಉಣ್ಣಿಕೃಷ್ಣ, ಪಿ.ಡಿ.ಪೊನ್ನಪ್ಪ, ಅನಿತಾ ಪೂವಯ್ಯ, ಸವಿತ ರಾಕೇಶ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವಿಜಯೋತ್ಸವದಲ್ಲಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ಕಾರ್ಯಕರ್ತರು ಹೂವಿನ ಹಾರ ಹಾಕಿ ಗೌರವ ಸಮರ್ಪಿಸಿದರು.
ಸಿದ್ದಾಪುರ: ಸಿದ್ದಾಪುರದ ಹಿಂದೂ ಪರ ಸಂಘಟನೆಗಳು ವಿಜಯೋತ್ಸವ ಆಚರಿಸಿದರು.
ಈ ಸಂದರ್ಭ ಪ್ರಮುಖರಾದ ವಿ.ಕೆ ಲೋಕೇಶ್,ಕೆ.ಡಿ ನಾಣಯ್ಯ, ಸುರೇಶ್, ಗಿರೀಶ, ರಾಜೇಂದ್ರ ಸಿಂಗ್ ಇನ್ನಿತರರು ಹಾಜರಿದ್ದರು.
ಕೂಡಿಗೆ: ಕೂಡಿಗೆಯಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಾಗೂ ಬಿ.ಜೆ.ಪಿ. ಕಾರ್ಯಕರ್ತರಿಂದ ಸಂಭ್ರಮಾಚರಣೆ ನಡೆಯಿತು.
ಈ ಸಂದರ್ಭ ತಾಲೂಕು ಬಿಜೆಪಿ ಕಾರ್ಯದರ್ಶಿ ಕೆ. ವರದ, ಕೂಡಿಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಗಿರೀಶ, ತಾಲೂಕು ಪಂಚಾಯತಿ ಸದಸ್ಯ ಗಣೇಶ, ಯುವ ಮೂರ್ಚಾ ಅಧ್ಯಕ್ಷ ಶಶಿ ಕಿರಣ, ಸ್ಥಾನೀಯ ಸಮಿತಿಯ ಅಧ್ಯಕ್ಷ ಮಂಜುನಾಥ್, ಕೂಡಿಗೆ ಯುವ ಮೂರ್ಚಾದ ಅಧ್ಯಕ್ಷ ಬೋಮ್ಮೆಗೌಡನ ಚಿಣ್ಣಪ್ಪ, ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.
ಗುಡ್ಡೆಹೊಸೂರು: ಗುಡ್ಡೆಹೊಸೂರಿನಲ್ಲಿ ಬಿ.ಜೆ.ಪಿ. ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಈ ಸಂದÀರ್ಭ ಎಂ.ಆರ್. ಉತ್ತಪ್ಪ, ಕೆ.ಆರ್. ನಿತ್ಯನಂದ, ಅಭಿರಂಗ, ಜಿ.ಎಂ. ಸಲಿ, ಉಮೇಶ್, ಮತ್ತು ಗಣೇಶ್ ಗಾಣಿಗಾ, ಚಂಗಪ್ಪ, ಎಂ.ಆರ್. ಮಾದಪ್ಪ, ಬಿ.ಕೆ. ಮೋಹನ್, ಮಂಜು ಮುಂತಾದವರು ಹಾಜರಿದ್ದರು.
ಕುಶಾಲನಗರ: ಕುಶಾಲನಗರದ ಬಿಜೆಪಿ, ವಿಶ್ವ ಹಿಂದೂ ಪರಿಷದ್, ಭಜರಂಗದಳ ವತಿಯಿಂದ ಸಂಭ್ರಮಾಚರಣೆ ನಡೆಯಿತು.
ಪಟ್ಟಣದ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡಿದ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪರ ಘೋಷಣೆಗಳನ್ನು ಕೂಗಿದರು.
ಬಿಜೆಪಿ ಹಿರಿಯ ಮುಖಂಡ ಜಿ.ಎಲ್. ನಾಗರಾಜ್, ಪ.ಪಂ. ಸದಸ್ಯರಾದ ರೇಣುಕಾ, ಅಮೃತ್ರಾಜ್, ಹಿಂದೂಪರ ಸಂಘಟನೆಗಳ ಪ್ರಮುಖರಾದ ನವನೀತ್, ಮಂಜುನಾಥ್, ಅನೀಶ್, ಬಿ.ಎಸ್. ದಿನೇಶ್, ಎಂ.ಕೃಷ್ಣ, ಉಮಾಶಂಕರ್, ಬಿ.ಜೆ. ಅಣ್ಣಯ್ಯ, ಬಿಜೆಪಿ ಪ್ರಮುಖರಾದ ಮಂಡೇಪಂಡ ಬೋಸ್ ಮೊಣ್ಣಪ್ಪ, ಎಂ.ವಿ. ನಾರಾಯಣ, ವಿ.ಡಿ. ಪುಂಡರೀಕಾಕ್ಷ, ಶಿವಾಜಿರಾವ್, ನಿಸಾರ್ ಅಹಮ್ಮದ್, ಪ್ರದೀಪ್ ನಾಗರಾಜ್ ಮತ್ತಿತರರು ಇದ್ದರು.