ಸೋಮವಾರಪೇಟೆ, ಆ.5: ಕೊರಿಯರ್‍ನಲ್ಲಿ ಬಂದ ‘ತೀರ್ಥ’ವನ್ನು ಸೇವಿಸಿ ವ್ಯಕ್ತಿಯೋರ್ವ ಅಸುನೀಗಿರುವ ಘಟನೆ ಸಮೀಪದ ತಣ್ಣೀರುಹಳ್ಳ ಗ್ರಾಮದಲ್ಲಿ ನಡೆದಿದ್ದು, ಘಟನೆಯ ಬಗ್ಗೆ ಅನುಮಾನಗಳ ಹುತ್ತ ಮೂಡಿದೆ. ಇದೊಂದು ಕುತಂತ್ರದ ಹತ್ಯೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.ತಣ್ಣೀರುಹಳ್ಳ ಗ್ರಾಮದ ರಾಧ ಎಂಬವರ ಪತಿ ಕೆ. ಸುರೇಶ್ ಎಂಬವರೇ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟವರು. ಘಟನೆಯ ಹಿನ್ನೆಲೆ: ಕಳೆದ ಕೆಲ ವರ್ಷಗಳಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಕಣಾರ ಹೊಟೇಲ್‍ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಸುರೇಶ್ ಅವರು ನಿನ್ನೆ ದಿನ ತನ್ನ ಮನೆಯಲ್ಲಿಯೇ ಮೃತಪಟ್ಟಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕಾಸರಗೋಡಿನ ದೇವಾಲಯವೊಂದರಿಂದ ಕೊರಿಯರ್ ಮೂಲಕ ಬಂದ ತೀರ್ಥವನ್ನು ಸೇವಿಸಿ ಸುರೇಶ್ ಮೃತಪಟ್ಟಿದ್ದಾರೆ ಎಂಬ ಮಾತುಗಳು ಎಲ್ಲೆಡೆ ಹರಿದಾಡುತ್ತಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದರೆ ನೈಜಾಂಶ ಬೆಳಕಿಗೆ ಬರಲಿದೆ.
ಶನಿವಾರದಂದು ಸೋಮವಾರಪೇಟೆಯ ಕಣಾರ ಹೊಟೇಲ್‍ಗೆ ಕೊರಿಯರ್ ಬಂದಿದೆ. ಭಾನುವಾರ ಬೆಳಿಗ್ಗೆ ಕೆಲಸಕ್ಕೆ ಆಗಮಿಸಿದ ಸುರೇಶ್ ಅವರಿಗೆ ಹೊಟೇಲ್ ಮಾಲೀಕರು ಈ ಕೊರಿಯರ್‍ನ್ನು ನೀಡಿದ್ದಾರೆ. ಇದನ್ನು ಹೊಟೇಲ್‍ನ ಅಡುಗೆ ಮನೆಯಲ್ಲಿ ಬಿಚ್ಚಿ ನೋಡಿದಾಗ ಒಂದು ಬಾಟಲ್ ತೀರ್ಥ, ಒಂದು ಪತ್ರ ಮತ್ತು ಸ್ವಲ್ಪ ಹೂವುಗಳಿರುವದು ಕಂಡುಬಂದಿದೆ.
ತಾನು ಯಾವದೇ ಕೊರಿಯರ್ ಬುಕ್ಕಿಂಗ್ ಮಾಡದೇ ಇದ್ದರೂ ಸಹ ತನ್ನದೇ ವಿಳಾಸಕ್ಕೆ ಬಂದಿರುವ ಕೊರಿಯರ್‍ನ್ನು ಸಂಜೆ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಪೊಟ್ಟಣದೊಳಗಿದ್ದ ಪತ್ರದಲ್ಲಿ ‘ಮನೆಯಲ್ಲಿ ಪೂಜೆ ಸಲ್ಲಿಸಿ ಈ ತೀರ್ಥವನ್ನು ಮನೆಯ ಯಜಮಾನ ಕುಡಿಯಬೇಕು’ ಎಂದು ಬರೆದಿತ್ತು ಎನ್ನಲಾಗಿದ್ದು, ಅದರಂತೆ ನಿನ್ನೆ ಸಂಜೆ ಮನೆಯಲ್ಲಿ ಪೂಜೆ ಸಲ್ಲಿಸಿ ಬಾಟಲಿಯಲ್ಲಿದ್ದ ತೀರ್ಥವನ್ನು ಕುಡಿದಿದ್ದಾರೆ.
ಕೆಲ ಕ್ಷಣಗಳಲ್ಲಿಯೇ ಸುರೇಶ್ ಅವರ ಬಾಯಿಂದ ರಕ್ತ ಸೋರಿಕೆಯಾಗಿದ್ದು, ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಷ್ಟರಲ್ಲಾಗಲೇ ಪ್ರಾಣಪಕ್ಷಿ ಹಾರಿದೆ. ಇಂದು ಮಡಿಕೇರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಮೃತರು ಪತ್ನಿ ಸೇರಿದಂತೆ ಈರ್ವರು ಪುತ್ರರನ್ನು ಅಗಲಿದ್ದಾರೆ.
ಹತ್ಯೆಗೆ ತೀರ್ಥದ ಸ್ಕೆಚ್?: ಸುರೇಶ್ ಅವರ ಸಾವಿನ ನಂತರ ಹಲವಷ್ಟು ಅನುಮಾನಗಳು ಹುಟ್ಟಿಕೊಳ್ಳಲಾರಂಭಿಸಿವೆ. ಕಾಸರ ಗೋಡುವಿನ ದೇವಾಲಯವೊಂದರÀ ಹೆಸರಿನಲ್ಲಿ ಕೊರಿಯರ್ ಮೂಲಕ ಯಾರೋ ತೀರ್ಥದ ಬದಲಿಗೆ ಸೈನೈಡ್ ಹಾಕಿ ಕಳುಹಿಸಿರಬಹುದು. ಅಥವಾ ತೀರ್ಥವೇ ‘ಫುಡ್ ಪಾಯ್ಸನ್’ ಆಗಿರಬಹುದು. ಅಥವಾ ತೀರ್ಥದೊಂದಿಗೆ ಅವರೇ ವಿಷ ಸೇವಿಸಿರಬಹುದು. ತೀರ್ಥ ಸೇವಿಸುವಾಗ ಹೃದಯಾಘಾತ ಎಂಬಿತ್ಯಾದಿ ಮಾತುಗಳು ಹರಿದಾಡುತ್ತಿವೆ.
ಈ ಮಧ್ಯೆ ಸುರೇಶ್ ಅವರನ್ನು ತೀರ್ಥದ ಸ್ಕೆಚ್ ಮೂಲಕ ಹತ್ಯೆ ಮಾಡಲಾಗಿದೆ ಎಂಬ ಊಹಾಪೋಹಗಳೂ ಜನವಲಯದಲ್ಲಿ ಹರಿದಾಡುತ್ತಿದ್ದು, ದೇವಾಲಯವೊಂದರÀ ಹೆಸರಿನಲ್ಲಿ ಅವರಿಗೆ ತೀರ್ಥವನ್ನು ಕಳುಹಿಸಿ ವ್ಯವಸ್ಥಿತ ರೀತಿಯಲ್ಲಿ ಹತ್ಯೆ ಮಾಡಿರುವ ಬಗ್ಗೆ ಗುಸು ಗುಸು ಕೇಳಿಬರುತ್ತಿವೆ.
(ಮೊದಲ ಪುಟದಿಂದ)
ಸ್ಥಳೀಯ ವ್ಯಕ್ತಿಯ ಕೈವಾಡ?: ಇದೇ ಘಟನೆಗೆ ಸಂಬಂಧಿಸಿದಂತೆ ಪಟ್ಟಣದ ಬಾಣಾವರ ರಸ್ತೆಯ ವ್ಯಕ್ತಿಯೋರ್ವನ ಮೇಲೆ ಎಲ್ಲರ ಸಂಶಯದ ದೃಷ್ಟಿ ನೆಟ್ಟಿದೆ. ಈತನೇ ವಿಷವನ್ನು ತೀರ್ಥ ರೂಪದಲ್ಲಿ ಸುರೇಶ್‍ಗೆ ಕೊರಿಯರ್ ಮೂಲಕ ಕಳುಹಿಸಿದ್ದಾನೆ ಎಂಬ ಸಂಶಯ ಬಲವಾಗಿದ್ದು, ವಿನೂತನ ಪ್ರಯೋಗದ ಮೂಲಕ ನಡೆದಿದೆ ಎನ್ನಲಾಗುವ ಹತ್ಯೆಗೆ ಅನೈತಿಕ ಸಂಬಂಧ ಕಾರಣವೇ? ಎಂಬದು ಸದ್ಯದ ನಿಗೂಢತೆ.
ಬೆಂಕಿಗೆ ಹಾಕಿದ್ದು ಯಾರು?: ಸುರೇಶ್ ಅವರು ತನ್ನ ಮನೆಗೆ ಕೊರಿಯರ್‍ನ ಬಾಕ್ಸ್ ತಂದು ಅದರೊಳಗಿದ್ದ ತೀರ್ಥವನ್ನು ಸೇವಿಸಿದ ತಕ್ಷಣ ರಕ್ತ ಕಾರಿಕೊಂಡು ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ನಡುವೆ ತೀರ್ಥದ ಬಾಟಲ್, ಕೊರಿಯರ್ ಬಾಕ್ಸ್ ಎಲ್ಲಿದೆ? ಎಂಬ ಪ್ರಶ್ನೆಯೂ ಮೂಡಿದೆ. ಎರಡನ್ನೂ ಬೆಂಕಿಗೆ ಹಾಕಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ತೀರ್ಥ ಸೇವಿಸಿದ ಸುರೇಶ್ ಅವರೇ ಬೆಂಕಿಗೆ ಹಾಕಿದಾರ? ಎಂಬ ಬಗ್ಗೆ ಪೊಲೀಸರ ತನಿಖೆ ನಡೆಯಬೇಕಿದೆ.
ಪತ್ನಿಯಿಂದ ದೂರು: ತನ್ನ ಪತಿ ತೀರ್ಥ ಸೇವಿಸಿದ ನಂತರ ಎದೆನೋವು ಎಂದು ಹೇಳಿದರು. ಕೆಲ ಕ್ಷಣಗಳಲ್ಲಿ ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮೃತ ಸುರೇಶ್ ಅವರ ಪತ್ನಿ ರಾಧ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಠಾಣಾಧಿಕಾರಿ ಶಿವಶಂಕರ್ ಅವರು ತನಿಖೆ ಮುಂದುವರೆಸಿದ್ದಾರೆ. ಮೃತದೇಹದ ಕೆಲ ಭಾಗಗಳನ್ನು ಮೈಸೂರಿಗೆ ಕಳುಹಿಸಿದ್ದು, ಎಫ್‍ಎಸ್‍ಎಲ್ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ.
- ವಿಜಯ್ ಹಾನಗಲ್