ಮಡಿಕೇರಿ, ಆ. 5: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾಮಠ ಹಾಗೂ ಸಹಮತ ವೇದಿಕೆ ಕೊಡಗು ಘಟಕದ ವತಿಯಿಂದ ಇಲ್ಲಿನ ಕಾವೇರಿ ಹಾಲ್‍ನಲ್ಲಿ ‘ಮತ್ತೆ ಕಲ್ಯಾಣ’ ಸಾರ್ವಜನಿಕ ಸಮಾವೇಶ ನಡೆಯಿತು.

ಸಮಾವೇಶದ ಸಾನ್ನಿಧ್ಯ ವಹಿಸಿದ್ದ ತರಳಬಾಳು ಜಗದ್ಗುರು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಸಮಾಜದಲ್ಲಿ ಮಾತನಾಡುವವರು ಅಧಿಕ; ಆದರೆ, ಕೃತಿಗೆ ಇಳಿಸುವವರು ಕಡಿಮೆ. ಹಾಗಾಗಿ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಯಾವದೇ ಅತಿಥಿಗಳಿಗೆ, ಮಾತಿಗೆ ಅವಕಾಶವಿರುವದಿಲ್ಲ. ತಿಳಿದವರನ್ನು, ಜನಪ್ರತಿನಿಧಿಗಳನ್ನು ಆಹ್ವಾನಿಸುತ್ತೇವೆ. ಆದರೆ, ಮಾತನಾಡಲು ಅಲ್ಲ; ಅವರೂ ಕೂಡ ನಮ್ಮ ಮಾತುಗಳನ್ನು ಆಲಿಸಲಿ ಎಂಬ ಕಾರಣಕ್ಕಾಗಿ. ಬದಲಿಗೆ ಶಾಲಾ ಮಕ್ಕಳ ಜೊತೆ ಸಂವಾದದೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತೇವೆ. ಅದರಿಂದಾಗಿ ಮತ್ತೆ ಕಲ್ಯಾಣವಾಗಲಿ ಎಂಬ ಆಶಯದೊಂದಿಗೆ ಎಂದು ಹೇಳಿದರು. ಇಷ್ಟು ಹೇಳಿ ಸ್ವಾಮೀಜಿಗಳ ಮಾತು ಮುಗಿದ ಕೂಡಲೇ ವೇದಿಕೆಯಲ್ಲಿದ್ದ ಶಾಸಕರಾದಿಯಾಗಿ ವಿವಿಧ ಧರ್ಮ ಗುರುಗಳು ಅಲ್ಲಿಂದ ತೆರಳಿದರು.

ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಸಂವಾದದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ‘ಸಮಾಜದಲ್ಲಿ ಜಾತಿ, ಬೇಧ, ಧರ್ಮ ಇರಬಾರದೆಂದು ಹೇಳುತ್ತಾರೆ. ಆದರೆ ಆ ವಿಚಾರದಲ್ಲಿ ಕ್ರಾಂತಿಗಳಾಗುತ್ತಿವೆ ಏಕೆ...?’, ‘ಲಿಂಗ ಅಸಮಾನತೆ ಕಾಣುತ್ತಿದೆ ಇದಕ್ಕೆ ಕಾರಣ...?’ ರಾಜಕೀಯ ಅರಾಜಕತೆಯಲ್ಲಿ ಸಂಘರ್ಷವಾಗುತ್ತಿದ್ದು, ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ, ಹೀಗಾದರೆ ಮತ್ತೆ ಕಲ್ಯಾಣ ಹೇಗೆ ಸಾಧ್ಯ...? ‘ಬಸವಣ್ಣ, ಅಂಬೇಡ್ಕರರು ಜಾತಿ, ಮತ ಮೆಟ್ಟಿ ಬೆಳೆದಿದ್ದಾರೆ. ಈಗ ಜಾತಿ, ಮತದ ಆಧಾರದಲ್ಲಿ ಮೀಸಲಾತಿ ಮಾಡುತ್ತಿದ್ದಾರೆ ಏಕೆ...?’ ‘ಲಿಂಗಾಯಿತ ಸಮಾಜ ಹಿಂದೂ ಧರ್ಮವೋ ಅಥವಾ ಬೇರೆಯಾ...?; ‘ಸಮಾನತೆ ಎಂದು ಹೇಳುವವರು ಮೀಸಲಾತಿ ಏಕೆ ತರುತ್ತಿದ್ದಾರೆ?’ ‘ಶಿವನ ಒಲಿಸಿಕೊಳ್ಳಲು ಹೋಮ - ಹವನ ಏನೂ ಬೇಡ; ಅಂತರಂಗ ಶುದ್ಧಿ ಇದ್ದರೆ ಸಾಕು ಎಂದು ಹೇಳುತ್ತಾರೆ, ಆದರೂ ಇದನ್ನೆಲ್ಲ ಮಾಡುತ್ತಾರೆ ಏಕೆ...?; ‘ವಚನದಲ್ಲಿ ಸತ್ಯಕ್ಕೆ ಮಹತ್ವವಿದೆ; ಸುಳ್ಳಿಗೆ ಇಲ್ಲ, ಆದರೆ ಈಗ ಸತ್ಯ ಸಾಯುತ್ತಿದೆ. ಸುಳ್ಳು ಹೆಚ್ಚಾಗುತ್ತಿದೆ ಏಕೆ?; ‘ಧರ್ಮಾತೀಥವಾಗಿರುವ ಮಠಗಳು ಧರ್ಮಕ್ಕಾಗಿ ಹೋರಾಡುತ್ತಿವೆ ಏಕೆ..?’ ‘ಎಲ್ಲರೂ ಸಮಾನರು ಎನ್ನುತ್ತಾರೆ; ಶಾಲೆಗಳಲ್ಲಿ ಸಮಾನತೆಗೆ ಸಮವಸ್ತ್ರ ಕೊಡುತ್ತಾರೆ. ಆದರೆ, ಫೀಸ್, ವಿದ್ಯಾರ್ಥಿ ವೇತನ, ಮುಂತಾದ ವುಗಳಿಗೆ ಜಾತಿ, ಆದಾಯದ ಮಿತಿಯೊಂದಿಗೆ ಮೀಸಲಾತಿಯ ತಾರತಮ್ಯ ಏಕೆ..? ಎಲ್ಲರಿಗೂ ಒಂದೇ ರೀತಿಯ ನಿಯಮವಿರಬಾರದೇಕೆ...?’ ‘12ನೇ ಶತಮಾನದಲ್ಲಿದ್ದ ಸಮಾಜ ಸುಧಾರಣೆ ನಂತರದಲ್ಲಿ ನಿರಂತರವಾಗಿ ಪರಿಪಾಲನೆ ಏಕೆ ಆಗಿಲ್ಲ...?’ ‘ಅನುಭವ ಮಂಟಪ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ ಅಂತ ಹೇಳುತ್ತಾರೆ. ಇದು ಹೇಗೆ?’ ಹೀಗೆ ತಮ್ಮ ಮನದಲ್ಲಿದ್ದ ಪ್ರಶ್ನೆಗಳನ್ನು ಹೊರಹಾಕಿದರು. ವಿವಿಧ ಶಾಲಾ - ಕಾಲೇಜುಗಳ ವಿದ್ಯಾರ್ಥಿಯೊಂದಿಗೆ ಕೆಲವು ಸಾರ್ವಜನಿಕರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಕೊಣನೂರು ಕಾಲೇಜು ಶಿಕ್ಷಕ ಡಾ. ಪ್ರಕಾಶ್ ಹಾಗೂ ಶಿವಾಚಾರ್ಯ ಸ್ವಾಮೀಜಿಗಳು ಪ್ರಶ್ನೆಗಳಿಗೆ ಉತ್ತರಿಸಿದರು.